ಯಾದಗಿರಿ: ಅಕ್ರಮವಾಗಿ ನಂದಿನಿ ಹಾಲಿನ ಪುಡಿ ಪ್ಯಾಕೇಟ್ಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಾಹನ ಸಮೇತ ಲಕ್ಷಾಂತರ ರೂ. ಮೌಲ್ಯದ ಹಾಲಿನ ಪುಡಿ ಪ್ಯಾಕೇಟ್ಗಳನ್ನು ಜಪ್ತಿ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಹಪುರ ತಾಲೂಕಿನ ಹತ್ತಿಗೂಡೂರ ಗ್ರಾಮದ ಬಳಿಯ ಪೆಟ್ರೋಲ್ ಬಂಕ್ ಹತ್ತಿರ ಸರ್ಕಾರದ ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿನ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ವಿತರಿಸಬೇಕಾದಂತಹ ಹಾಲಿನ ಪುಡಿ ಪ್ಯಾಕೇಟ್ಗಳನ್ನು ಅಕ್ರಮವಾಗಿ ಬೊಲೆರೋ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶಹಪುರ ಠಾಣೆಯ ಪೊಲೀಸರು ದಾಳಿ ನಡೆಸಿ, 6 ಲಕ್ಷ 42 ಸಾವಿರ ರೂ. ಮೌಲ್ಯದ ಹಾಲಿನ ಪುಡಿ ಪ್ಯಾಕೇಟ್ಗಳ ಜೊತೆ ಬೊಲೆರೋ ವಾಹನ ಜಪ್ತಿ ಮಾಡಿದ್ದಾರೆ.
ದಾಳಿ ವೇಳೆ ವಾಹನ ಚಾಲಕ ಮೆಹಬೂಬ್ ಧಖನಿ ಸೇರಿದಂತೆ ಇನ್ನೊಬ್ಬ ಆರೋಪಿಯನ್ನ ವಶಕ್ಕೆ ಪಡೆದ ಪೋಲಿಸರು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಶಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.