ಯಾದಗಿರಿ: ಕೌಟುಂಬಿಕ ಕಲಹದ ಕಾರಣದಿಂದ ವ್ಯಕ್ತಿಯೋರ್ವ ಚಾಕುವಿನಿಂದ ಇರಿದು ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ನಗರದ ವಾಲ್ಮೀಕಿ ಬಡಾವಣೆ ಹತ್ತಿರದ ಮಾಷಮ್ಮ ಮಂದಿರದ ಬಳಿ ನಡೆದಿದೆ.
ಬಸಮ್ಮ ನಕಲೋರ್ (55) ಕೊಲೆಯಾದ ಮಹಿಳೆ. ಪತಿ ದೊಡ್ಡ ಸಾಬಣ್ಣ ಈತ ಮಾಷಮ್ಮ ದೇವಿಯ ಪೂಜೆಗೆಂದು ತೆರಳಿದ್ದ ಬಸಮ್ಮಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಸಮ್ಮಳನ್ನ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಹಣ, ಆಸ್ತಿ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗುತ್ತಿದೆಯಾದರೂ, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಡಿತದ ಮತ್ತಿನಲ್ಲಿ ಸಾಬಣ್ಣ ಬಸಮ್ಮಳ ಕೊಲೆ ಮಾಡಿರುವುದಾಗಿ ಸಂಬಂಧಿಕರು ಆರೋಪಿಸಿದ್ದು, ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.