ಗುರುಮಠಕಲ್(ಯಾದಗಿರಿ): ಮದುವೆ ವಾರ್ಷಿಕೋತ್ಸವದ ದಿನದಂದೇ ದಂಪತಿ ನಡುವೆ ಕಲಹ ನಡೆದು, ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ನಡೆದಿದೆ. ಅಡುಗೆ ಹಾಗೂ ಮನೆ ಕೆಲಸದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಮನೆಯಲ್ಲೇ ಪತ್ನಿಗೆ ನೇಣು ಹಾಕಿ ಕೊಲೆಗೈದು, ಪತಿರಾಯ ಪರಾರಿಯಾಗಿದ್ದಾನೆ.
ಭೀಮರಾಯ ಎಂಬಾತನೇ ಕೊಲೆ ಆರೋಪಿಯಾಗಿದ್ದು, ಆತನ ಪತ್ನಿ ಪಾರ್ವತಿ ಕೊಲೆಗೀಡಾದವಳು. ಸೌರಾಷ್ಟ್ರಹಳ್ಳಿಯ ಪಾರ್ವತಿ ಹಾಗೂ ಗೋಪಾಳಪುರ ಗ್ರಾಮದ ಭೀಮರಾಯ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ಗೋಪಾಳಪುರ ಗ್ರಾಮದಲ್ಲಿ ವಿವಾಹ ಮಾಡಲಾಗಿತ್ತು. ಭೀಮರಾಯ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ದಂಪತಿ ಆರಂಭದ ಕೆಲ ತಿಂಗಳ ಕಾಲ ಅನ್ಯೋನ್ಯವಾಗಿದ್ದರು. ಆದರೆ ದಿನ ಕಳೆದಂತೆ ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಗಂಡನು ಹೆಂಡತಿ ಜೊತೆ ಜಗಳ ಮಾಡುತ್ತಿದ್ದನಂತೆ.
ಈ ವಿಚಾರವಾಗಿ ಇಬ್ಬರ ನಡುವೆ ನಿರಂತರವಾಗಿ ಜಗಳ ಆಗುತ್ತಿತ್ತು. ಯಲ್ಹೇರಿ ಗ್ರಾಮದ ಜಾತ್ರೆ ಹಿನ್ನೆಲೆ ಬೆಂಗಳೂರಿನಿಂದ ದಂಪತಿ ಗೋಪಾಳಪುರ ಗ್ರಾಮಕ್ಕೆ ಬಂದಿದ್ದರು. ಮೇ 13ರಂದು ಮದುವೆ ವಾರ್ಷಿಕೋತ್ಸವದ ದಿನವೂ ಇಬ್ಬರ ನಡುವೆ ಮತ್ತೆ ಜಗಳ ಶುರುವಾಗಿದೆ. ತಡರಾತ್ರಿ ಭೀಮರಾಯ ಪತ್ನಿ ಪಾರ್ವತಿಗೆ ಮನೆಯಲ್ಲಿ ನೇಣು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣದ ಬಗ್ಗೆ ಎಸ್ಪಿ ಡಾ. ಸಿ.ಬಿ ವೇದಮೂರ್ತಿ ಮಾತನಾಡಿ, ಪದೆ ಪದೇ ದಂಪತಿ ನಡುವೆ ಜಗಳವಾಗುತ್ತಿತ್ತು. ಗಂಡ ಭೀಮರಾಯನೇ ತನ್ನ ಹೆಂಡತಿ ಪಾರ್ವತಿಯ ಕೊಲೆ ಮಾಡಿದ್ದಾನೆಂದು ದೂರು ನೀಡಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಗಾಂಜಾ ವ್ಯಸನಿಗಳ ಅಟ್ಟಹಾಸ : ಪೋಷಕರೆದುರೇ ಮಗನ ಹತ್ಯೆ