ಯಾದಗಿರಿ : ಬಿರುಗಾಳಿ ಸಹಿತ ಮಳೆಯಿಂದ ವಿದ್ಯುತ್ ಕಂಬವೊಂದು ನೆಲಕ್ಕುರಳಿ ಎರಡು ದಿನ ಕಳೆದರೂ ಕೂಡ ಜೆಸ್ಕಾಂ ಅಧಿಕಾರಿಗಳು ರಿಪೇರಿ ಮಾಡಿಸುವ ಕೆಲಸಕ್ಕೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶ ಕಾರಣವಾಗಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರವಲಯದ ಜಮೀನುವೊಂದರಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಬಿರುಗಾಳಿ ಮಿಶ್ರಿತ ಮಳೆಯಿಂದ ಹೈಓಲ್ಟೇಜ್ ವಿದ್ಯುತ್ ಕಂಬವೊಂದು ಧರೆಗುರಳಿದೆ. ಈ ಕುರಿತು ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಇದಕ್ಕೆ ತಲೆ ಕೆಡಿಸಿಕೊಳ್ಳದೆ ದಿವ್ಯ ನಿರ್ಲಕ್ಷ ತೋರಿದ್ದಾರೆ.
ಕೊರೊನಾ ಅಟ್ಟಹಾಸಕ್ಕೆ ಸರ್ಕಾರ ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಿದೆ. ಗ್ರಾಮದ ಮಕ್ಕಳು ಅದೇ ವಿದ್ಯುತ್ ಕಂಬದ ಬಳಿ ತೆರಳಿ ವಿದ್ಯುತ್ ತಂತಿ ಜೊತೆ ಆಟವಾಡುತ್ತಿದ್ದಾರೆ. ಅದೃಷ್ಟವಶಾತ್ ವಿದ್ಯುತ್ ಇಲ್ಲದ ಕಾರಣ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.
ವಿದ್ಯುತ್ ಕಂಬ ನೆಲಕ್ಕುರಳಿ ಎರಡು ದಿನ ಕಳೆದರೂ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿಲ್ಲ. ಇವರ ನಿರ್ಲಕ್ಷಕ್ಕೆ ಏನಾದ್ರೂ ಅನಾಹುತ ಸಂಭವಿಸಿದ್ರೆ ಯಾರು ಹೊಣೆ ಎಂದು ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.