ಗುರುಮಠಕಲ್: ಈ ದೇಶದ ಬೆನ್ನೆಲುಬಾದ ರೈತರ ಬಗ್ಗೆ ಸರ್ಕಾರಗಳು ಯಾವುದೇ ಅನುಕಂಪ ಮತ್ತು ಸಹಾನುಭೂತಿಯಿಂದ ಮಾತನಾಡುವುದನ್ನು ಬಿಟ್ಟು ಅವರು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಬೆಲೆಯನ್ನು ನೀಡಬೇಕು ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಗುರುಮಠಕಲ್ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಮುಂಗಾರು ಬೆಳೆಯ ಕೃಷಿ ಚಟುವಟಿಕೆಗಳು ತಾಲೂಕಿನಾದ್ಯಂತ ಭರದಿಂದ ಸಾಗಿದ್ದು, ರೈತರವ ಮುಖದಲ್ಲಿ ಭರವಸೆ ವ್ಯಕ್ತವಾಗುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಮಧ್ಯವರ್ತಿಗಳ ಪಾಲಾಗುತ್ತಿದ್ದು, ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಿ ಅವರಿಗೆ ಇನ್ನೂ ಹೆಚ್ಚಿನ ಸಹಾಯ ಸೌಲಭ್ಯ ನೀಡಬೇಕು ಎಂದು ತಿಳಿಸಿದರು.
ಕೊರೊನಾ ವೈರಸ್ನಿಂದ ಇಡೀ ಪ್ರಪಂಚದ ದೇಶಗಳು ಭಾಧಿತಗೊಂಡಿವೆ. ಈ ನಿಟ್ಟಿನಲ್ಲಿ ನಾವು ನಮ್ಮ ದೈನಂದಿನ ಜೀವನ ಕ್ರಮ ಪದ್ಧತಿಯನ್ನು ಬದಲಾಯಿಸಿಕೊಂಡು ಅದರೊಂದಿಗೆ ಹೋರಾಡಬೇಕಿದೆ. ಕೊರೊನಾ ವೈರಸ್ ನಿಗ್ರಹಕ್ಕಾಗಿ ಆರೋಗ್ಯ ಇಲಾಖೆ ಸೂಚಿಸಿದ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.
ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಮಲ್ಲಿಕಾರ್ಜುನ ವಾರದ್, ತಹಸೀಲ್ದಾರ್ ಸಂಗಮೇಶ ಜಿಡಿಗೆ, ಪುರಸಭೆ ಮುಖ್ಯಾಧಿಕಾರಿ ಜೀವನ ಕುಮಾರ್, ಪಿಎಸ್‌ಐ ಶೀಲಾದೇವಿ ನ್ಯಾಮಾನ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ತಮ್ಮಣ್ಣ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಶರಣು ಅವಂಟಿ, ಜೆಡಿಎಸ್ ಮುಖಂಡರಾದ ಕಿಷ್ಣಾರೆಡ್ಡಿ ಪೊಲೀಸ್ ಪಾಟೀಲ್, ಬಾಲಪ್ಪ ನೀರೆಟಿ, ನಗರ ಘಟಕ ಅಧ್ಯಕ್ಷ ನರಸಪ್ಪ ಧನ್ವಢ, ರಘುನಾಥರೆಡ್ಡಿ ಪಾಟೀಲ್ ಗವಿನೋಳ್, ರವಿ ಹೂಗಾರ, ಪುರಸಭೆ ಸದಸ್ಯರು ಮತ್ತು ಕೃಷಿ ಇಲಾಖೆ ಸಿಬ್ಬಂದಿ ಇತ್ತರರು ಇದ್ದರು.