ಸುರಪುರ: ಮೈಮೇಲೆ ಬಿಸಿ ನೀರು ಬಿದ್ದು ಬಾಲಕಿಯೋರ್ವಳು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ದೊಡ್ಡ ತಾಂಡದಲ್ಲಿ ನಡೆದಿದೆ.
ಆರತಿ (6 ವರ್ಷ) ಬಾಲಕಿ ಮೃತಪಟ್ಟಿದ್ದು, ತಂದೆ ನೆಹರು (47 ವರ್ಷ), ತಾರಿಬಾಯಿ (35) ಗೀತಾ (8) ಮತ್ತು ಐದು ವರ್ಷದ ಯುವರಾಜ ಎಂಬ ಮಗು ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.
ಘಟನೆಯ ಹಿನ್ನೆಲೆ: ಬೆಳಗ್ಗೆ ಜಾತ್ರೆಗೆ ಹೋಗಬೇಕೆಂದು ನಿರ್ಧರಿಸಿದ್ದ ಕುಟುಂಬಸ್ಥರು ಮನೆಯ ಮುಂದೆ ದೊಡ್ಡ ಪಾತ್ರೆಯಲ್ಲಿ ಬಿಸಿನೀರನ್ನು ಕಾಯಲು ಇಟ್ಟಿದ್ದಾರೆ. ಈ ವೇಳೆ ನಾಯಿಗಳು ಕಚ್ಚಾಡಿಕೊಂಡು ಬಂದು ಪಾತ್ರೆಗೆ ಡಿಕ್ಕಿಹೊಡೆದಿದ್ದರಿಂದ ಪಾತ್ರೆ ಪಲ್ಟಿಯಾಗಿ ಕುದಿಯುತ್ತಿದ್ದ ನೀರು ಕುಟುಂಬಸ್ಥರ ಮೇಲೆ ಚೆಲ್ಲಿದೆ. ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟು, ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಓದಿ: ದೇವರ ದಯೆಯಿಂದ ಬದುಕುಳಿದಿರುವೆ, ಧರ್ಮರಾಜ್ ಕೊಲೆಯಲ್ಲಿ ನನ್ನ ಕೈವಾಡವಿಲ್ಲ; ಸಾಹುಕಾರ ಭೈರಗೊಂಡ
ಎಲ್ಲರನ್ನೂ ಚಿಕಿತ್ಸೆಗಾಗಿ ಶಹಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆರತಿ ಎಂಬ ಬಾಲಕಿ ಮೃತಪಟ್ಟರೆ, ಇನ್ನುಳಿದ ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ರವಾನಿಸಲಾಗಿದೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.