ಯಾದಗಿರಿ: ಜಿಲ್ಲೆಯ ಕಿಲ್ಲನಕೇರಾ ಗ್ರಾಮದ ಹೊರವಲಯದಲ್ಲಿರುವ 150 ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ರಸ್ತೆ ಪಕ್ಕದಲ್ಲಿದ್ದ ಸಾಬರೆಡ್ಡಿ ಬನ್ನಪ್ಪ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ.
ಈ ಸಂದರ್ಭದಲ್ಲಿ 112 ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಣ್ಣ (ಹೆಚ್‌ಸಿ) ಮತ್ತು ಅವಿನಾಶ (ಪಿಸಿ) ಸ್ಥಳದಲ್ಲಿನ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಅಗ್ನಿ ನಂದಿಸುವಲ್ಲಿ ಸಹಾಯ ಮಾಡಿದ್ದಾರೆ. ಇವರ ಕರ್ತವ್ಯನಿಷ್ಠೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಮನೆಯಲ್ಲಿದ್ದ ಬನ್ನಮ್ಮ (60), ಸಾಬರೆಡ್ಡಿ (30), ವೆಂಕಪ್ಪ (26), ಭುವನ (5), ದೀಕ್ಷಾ (5), ಭಾಗೇಶ (12) ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.