ಯಾದಗಿರಿ: ಜಿಲ್ಲೆಯಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟು, ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಪ್ರತ್ಯೇಕ ಘಟನೆಯಲ್ಲಿ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದ ಮೋನಮ್ಮ (25) ಹಾಗೂ ಮಕ್ಕಳಾದ ಭಾನು (4) ಮತ್ತು ಶ್ರೀನಿವಾಸ್ (2) ಹಾಗೂ ಎಸ್. ಹೊಸಳ್ಳಿ ಗ್ರಾಮದ ಸಾಬಣ್ಣ ಮೃತಪಟ್ಟಿದ್ದಾರೆ.
ಗಾಜರಕೋಟ ಗ್ರಾಮದ ಮೋನಮ್ಮ ಎಂಬುವರು ಮಕ್ಕಳೊಂದಿಗೆ ಯಾದಗಿರಿ ಆಸ್ಪತ್ರೆಗೆ ಆಗಮಿಸಿದ್ದರು. ಬೈಕ್ನಲ್ಲಿ ಗ್ರಾಮಕ್ಕೆ ಮರಳುತ್ತಿದ್ದಾಗ ಮಳೆ ಜೋರಾಗಿದ್ದರಿಂದ ಎಸ್. ಹೊಸಳ್ಳಿ ಗ್ರಾಮದ ಸಮೀಪ ಹುಣಸೆಮರದ ಕೆಳಗೆ ನಿಂತಿದ್ದರು. ಆಗಲೇ ಸಿಡಿಲು ಬಡಿದಿದ್ದು, ಸ್ಥಳದಲ್ಲೇ ಮೋನಮ್ಮ ಹಾಗೂ ಮಕ್ಕಳಾದ ಭಾನು ಹಾಗೂ ಶ್ರೀನಿವಾಸ್ ಸಾವಿಗೀಡಾಗಿದ್ದಾರೆ. ಇದೇ ವೇಳೆ ಭೀಮಾಶಂಕರ (32) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಯುವಕ ಸಾವು: ಯಾದಗಿರಿ ತಾಲೂಕಿನ ಎಸ್. ಹೊಸಳ್ಳಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಾಬಣ್ಣ (18) ಎಂಬ ಯುವಕನೂ ಸಹ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಮಳೆಗೆ ಇಬ್ಬರು ಬಲಿ: ಸಿಡಿಲು ಬಡಿದು ರೈತ, ಕುರಿಗಾಹಿ ಸಾವು