ಯಾದಗಿರಿ: ವಿಚ್ಛೇದನ ನೀಡಲು ಪತ್ನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪತಿಯು ರಾಜಿ ಮಾಡಿಕೊಳ್ಳುವ ನೆಪದಲ್ಲಿ ಪತ್ನಿಯ ತಂದೆ ಮತ್ತು ಮೂವರು ಸಂಬಂಧಿಕರನ್ನು ಕರೆಯಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಾಳುಗಳೂ ಜೀವ ಕಳೆದುಕೊಂಡಂತಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಛಾಯಾ ಕಾಲೋನಿಯಲ್ಲಿ ಬುಧವಾರ ಶರಣಪ್ಪ ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ನಾಗಪ್ಪ ಹಾಗೂ ಶರಣಪ್ಪ ಸರೂರ ಎಂಬುವರು ನಿನ್ನೆಯೇ ಮೃತರಾಗಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ರಾಯಚೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸಿದ್ರಾಮಪ್ಪ ಮುರಾಳ, ಮುತ್ತಪ್ಪ ಮುರಾಳ ಎಂಬುವರು ಗುರುವಾರ ಅಸುನೀಗಿದ್ದಾರೆ.
ವಿಚ್ಛೇದನ ಕಲಹ: ಜೆಸಿಬಿ ಚಾಲಕ ಶರಣಪ್ಪ ಹಾಗೂ ಪತ್ನಿ ಹುಲಿಗೆಮ್ಮ ನಡುವೆ ಕೌಟುಂಬಿಕ ಕಲಹ ಇತ್ತು. ಲಿಂಗಸೂಗೂರಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿರುವ ಪತ್ನಿ ಹುಲಿಗೆಮ್ಮ, ಪತಿಯ ಕಿರುಕುಳ ತಾಳಲಾಗದೆ ಕಳೆದ 14 ತಿಂಗಳುಗಳಿಂದ ಲಿಂಗಸೂಗೂರಿನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವಿಚಾರವಾಗಿ ಮಾತನಾಡಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿನ ಪತ್ನಿಯ ತಂದೆ (ಮಾವ) ಹಾಗೂ ಮೂವರು ಸಂಬಂಧಿಕರನ್ನು ನಾರಾಯಣಪುರದ ತನ್ನ ನಿವಾಸಕ್ಕೆ ಕರೆಯಿಸಿದ್ದ.
ಪತ್ನಿಯಿಂದ ವಿಚ್ಛೇದನ ಕೊಡಿಸಲು ನೀವು ಸಹಕರಿಸಿ ಎಂದು ಈ ನಾಲ್ವರಿಗೂ ಹೇಳಿದ್ದಾನೆ. ಆದರೆ ಅವರು ಒಪ್ಪದಿದ್ದಾಗ ಮನೆಯ ಕೋಣೆಯಿಂದ ಹೊರಗಡೆ ಬಂದು, ಬಾಗಿಲಿಗೆ ಬೀಗ ಹಾಕಿ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಮನೆಯಲ್ಲಿನ ಬೆಂಕಿ ಹಾಗೂ ಚೀರಾಟ ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಕೃತ್ಯ ಎಸಗಿದ ಬಳಿಕ ಆರೋಪಿಯು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಈ ಬಗ್ಗೆ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಚ್ಛೇದನ ಕೊಡಲು ನಿರಾಕರಣೆ.. ಯಾದಗಿರಿಯಲ್ಲಿ ಪತ್ನಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ, ಇಬ್ಬರು ಸಾವು