ಸುರಪುರ (ಯಾದಗಿರಿ): ತಾಲೂಕಿನ ದೇವಿಕೇರಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಮನೆಗೆ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ದೇವಿಕೇರಿ ಗ್ರಾಮದ ಇಮಾಮ್ ಸಾಬ್ ಎಂಬುವವರ ಮನೆಗೆ ಬೆಂಕಿ ಬಿದ್ದಿದ್ದು, ಮಗಳ ಮದುವೆಗೆಂದು ಸಾಲ ಮಾಡಿ ತಂದಿಡಲಾಗಿದ್ದ 8.50 ಲಕ್ಷ ರೂಪಾಯಿ ನಗದು, 45 ಗ್ರಾಂ ಬಂಗಾರ ಮತ್ತು ಮನೆಯಲ್ಲಿದ್ದ ಹಲವಾರು ವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಕಿಗೆ ಆಹುತಿಯಾದ ವಸ್ತುಗಳ ಒಟ್ಟು ಮೌಲ್ಯ 15 ಲಕ್ಷ ರೂ.ಗಿಂತ ಅಧಿಕ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರದ ಕಾರಣ ಜೀವ ಹಾನಿಯಾಗಿಲ್ಲ.
ಸ್ಥಳಕ್ಕೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಲಮಾಡಿ ಕಟ್ಟಿಸಿರುವ ಮನೆ ಕೂಡ ಸುಟ್ಟುಹೋಗಿದೆ. ಮಗಳ ಮದುವೆಗೆಂದು ಸಾಲ ಮಾಡಿ ತಂದ ಹಣ ಹಾಗೂ ಬಂಗಾರ ಸುಟ್ಟುಹೋಗಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕೆಂದು ಮನೆಯ ಸದಸ್ಯೆ ಮಹಿಬೂಬಿ ಮನವಿ ಮಾಡಿದ್ದಾರೆ.