ಯಾದಗಿರಿ: ಪೊಲೀಸ್ ಇಲಾಖೆ, ಬಾಲ ಕಾರ್ಮಿಕ ಇಲಾಖೆ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ಶಾಲೆ ಬಿಟ್ಟ ಮಕ್ಕಳನ್ನು ತಪಾಸಣೆ ನಡೆಸಿದ್ದಾರೆ.
ಗುರುಮಠಕಲ್ ತಾಲೂಕಿನ ಸೈದಾಪೂರ ವ್ಯಾಪ್ತಿಯಲ್ಲಿ ಬರುವ ಗುಂಜನೂರ, ಚಲ್ಹೇರಿ, ಜೈಗ್ರಾಮ, ನಂದೆಪಲ್ಲಿ, ಸಂಕ್ಲಾಪುರ ಹಾಗೂ ಇತರೆ ಗ್ರಾಮಗಳಲ್ಲಿ ಶಾಲೆ ಬಿಟ್ಟ ಮಕ್ಕಳ ತಪಾಸಣೆ ನಡೆಸಲಾಯಿತು.
ಈ ವೇಳೆ 9ರಿಂದ 18 ವರ್ಷದೊಳಗಿನ ಸುಮಾರು 15 ಮಕ್ಕಳ ವರದಿ ಪಡೆದು ಶಾಲೆಗೆ ದಾಖಲಿಸಲಾಯಿತು.
6 ವಾಹನಗಳನ್ನು ತಡೆದು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳ ತಂಡ, ವಾಹನ ಚಾಲಕರು ಮತ್ತು ಮಕ್ಕಳ ಮಾಹಿತಿ ಪಡೆದಿದ್ದಾರೆ. ಪೊಲೀಸ್ ಇಲಾಖೆಯವರು ವಾಹನಗಳನ್ನು ಜಪ್ತಿ ಮಾಡಿ ಪ್ರತಿಯೊಂದು ವಾಹನಕ್ಕೂ ದಂಡ ವಿಧಿಸುವುದರ ಜೊತೆಗೆ 1988ರ ಮೋಟಾರು ವಾಹನ ಕಾಯ್ದೆಯಡಿ ವಾಹನ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ ಸಿಂಗ್, ಡಿಸಿಪಿಯು ಘಟಕದ ಸಾಬಯ್ಯ, ಮಕ್ಕಳ ಸಹಾಯವಾಣಿಯ ಶರಣಪ್ಪ, ಕಾರ್ಮಿಕ ಇಲಾಖೆಯ ಚಂದ್ರಶೇಖರ ಬಂದಳ್ಳಿ, ಅಮೃತರಾವ್ ಕೊತ್ವಾಲ್ ಇದ್ದರು.