ಸುರಪುರ(ಯಾದಗಿರಿ): ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ರೈತ ಕೃಷಿ ಕೂಲಿಕಾರರ ಸಂಘದಿಂದ ಉಪ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದ ರೈತರು ಹಾಗೂ ಕೂಲಿ ಕಾರ್ಮಿಕರು ದೊಡ್ಡಮಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಅಧಿಕಾರಿಗಳು ಇದುವರೆಗೂ ಬೆಳೆ ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ನಿರಂತರವಾಗಿ ಸುರಿದ ಮಳೆಯಿಂದ ತಾಲೂಕಿನಲ್ಲಿ ಹತ್ತಿ, ಭತ್ತ, ಶೇಂಗಾ, ತೊಗರಿ ಸೇರಿದಂತೆ ಅನೇಕ ಬೆಳೆಗಳು ನಷ್ಟವಾಗಿವೆ. ಇದರಿಂದ ರೈತರು ತುಂಬಾ ತೊಂದರೆಗೆ ಸಿಲುಕಿದ್ದಾರೆ. ಆದರೆ, ಇದುವರೆಗೂ ಯಾವ ಅಧಿಕಾರಿಯೂ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸುವುದು ಹಾಗೂ ಸರ್ಕಾರಕ್ಕೆ ವರದಿಯನ್ನು ಕೂಡ ಸಲ್ಲಿಸಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ ಕೂಡಲೇ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಹಾಗೂ ಬೆಳೆ ನಷ್ಟದ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕೆಂದು ಆಗ್ರಹಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪ ತಹಶೀಲ್ದಾರ್ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೃಷಿಕೂಲಿಕಾರರ ಸಂಘದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.