ಸುರಪುರ: ತಾಲೂಕಿನ ಆಲ್ದಾಳ ಗ್ರಾಮದ ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬಾಗಿಲು ಬಂದ್ ಮಾಡಿ ಧರಣಿ ನಡೆಸಿದರು.
ಸುರಪುರ ನಗರದ ರಂಗಂಪೇಟೆಯಲ್ಲಿರುವ ಜೆಸ್ಕಾಂ ಇಲಾಖೆಯ ಕಚೇರಿ ದ್ವಾರದಲ್ಲಿ ಧರಣಿ ನಡೆಸಿದರು. ಸದ್ಯ ಭತ್ತ ಕಾಳು ಕಟ್ಟುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಜೆಸ್ಕಾಂ ಸರಿಯಾಗಿ ವಿದ್ಯುತ್ ಸರಬರಾಜು ಮಾಡದಿರುವುದರಿಂದ ಬೆಳೆಗಳು ಒಣಗಲಾರಂಭಿಸಿವೆ. ಆದ್ದರಿಂದ ರೈತರ ಅನುಕೂಲಕ್ಕಾಗಿ ದಿನಕ್ಕೆ ಕನಿಷ್ಠ 10 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕೆಂದು ಮುಖಂಡ ವೆಂಕಟೇಶ ಬೇಟೆಗಾರ ತಿಳಿಸಿದರು. ಧರಣಿ ನಿರತ ಅನೇಕ ರೈತರು ತಮ್ಮ ಬೇಸರ ಹೊರಹಾಕಿ, ಜೆಸ್ಕಾಂ ಕೂಡಲೆ ವಿದ್ಯುತ್ ನೀಡುವ ಭರವಸೆ ನೀಡಬೇಕು, ಇಲ್ಲವಾದಲ್ಲಿ ಕಚೇರಿ ಮುಂದೆಯೇ ವಿಷ ಸೇವಿಸುವುದಾಗಿ ನುಡಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಈರಣ್ಣ ಹಳಿಚಂಡಿ ಆಗಮಿಸಿ ರೈತರ ಮನವಿ ಆಲಿಸಿ ಮಾತನಾಡಿ, 10 ಗಂಟೆಗಳ ನಿರಂತರ ವಿದ್ಯುತ್ ನೀಡುವ ಆದೇಶವಿಲ್ಲದ ಕಾರಣ , 7 ತಾಸು ನಿರಂತರವಾಗಿ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.