ಯಾದಗಿರಿ: ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗಲಿದ್ದು, ಬಿತ್ತನೆ ಕಾರ್ಯಕ್ಕಾಗಿ ಜಿಲ್ಲೆಯ ರೈತರು ಹೊಲ ಹದ ಮಾಡಿಕೊಳ್ಳುತ್ತ ಮುಂಗಾರು ಬಿತ್ತನೆ ಚಟುವಟಿಕೆಗಳಿಗೆ ಅಣಿಯಾಗುತ್ತಿದ್ದಾರೆ.
ಯಾದಗಿರಿಯ ರೈತರು ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗುವ ಹಿನ್ನೆಲೆ ಬಿತ್ತನೆಗಾಗಿ ಜಮೀನು ಹದ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಬೇಸಿಗೆ ಇರುವ ಕಾರಣ ಬೆಳ್ಳಂಬೆಳಗ್ಗೆ ಜಮೀನಿಗೆ ತೆರಳುತ್ತಿರುವ ರೈತರು, ಎತ್ತು ಹಾಗೂ ಟ್ರ್ಯಾಕ್ಟರ್ ಮೂಲಕ ಕುಂಟೆ ಹೊಡೆದು ಬಿತ್ತನೆಗಾಗಿ ಮಣ್ಣನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಸತತ ನಷ್ಟ ಅನುಭವಿಸಿರುವ ರೈತರು, ಈ ವರ್ಷವಾದರೂ ಸಮೃದ್ಧಿಯ ಮಳೆ ಸುರಿಸಿ ನಮ್ಮ ಬದುಕು ಹಸನು ಮಾಡಯ್ಯ ಮೇಘರಾಜ ಅಂತ ಆಕಾಶದತ್ತ ಚಿತ್ತ ನೆಟ್ಟಿದ್ದಾರೆ.
ಜಿಲ್ಲೆಯಲ್ಲಿ 4 ಲಕ್ಷ 47 ಸಾವಿರದ 272 ಹೆಕ್ಟೇರ್ ಪ್ರದೇಶ ಉಳುಮೆ ಜಮೀನಿದ್ದು, ಇದರಲ್ಲಿ ಬಹುತೇಕ ರೈತರು ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ 1 ಲಕ್ಷ 79 ಸಾವಿರ 156 ಹೆಕ್ಟೇರ್ ನೀರಾವರಿ ಭೂಮಿಯಾಗಿದ್ರೆ, 2 ಲಕ್ಷ 60 ಸಾವಿರ 58 ಹೆಕ್ಟೇರ್ ಒಣ ಬೇಸಾಯ ಜಮೀನು ಇದೆ. ಇನ್ನು ನೀರಾವರಿ ಪ್ರದೇಶಗಳಲ್ಲಿ ಇಲ್ಲಿಯ ರೈತರು ಅತಿ ಹೆಚ್ಚು ಭತ್ತಕ್ಕೆ ಪ್ರಾತಿನಿಧ್ಯ ನೀಡಿದರೆ, ಒಣ ಬೆಸಾಯ ಜಮೀನಿನಲ್ಲಿ ರೈತರು ಅತಿ ಹೆಚ್ಚು ಹತ್ತಿ ಬೆಳೆಗೆ ಪ್ರಾಮುಖ್ಯತೆ ನೀಡುತ್ತಾರೆ. ಮುಂಗಾರು ಸಮೀಪಿಸುತ್ತಿದ್ದು, ಜಿಲ್ಲೆಯ ರೈತರು ಭತ್ತ, ಹತ್ತಿ, ತೊಗರಿ, ಹೆಸರು, ಶೇಂಗಾ ಬೆಳೆಗಳನ್ನ ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ವಾಡಿಕೆಯಂತೆ ಜೂನ್ ಮೊದಲ ವಾರದಿಂದ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗಲಿದೆ. ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಕೃಷಿ ಇಲಾಖೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ.
2,90,897 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಿದ್ದು, ಬಿತ್ತನೆಗೆ 25,383 ಕ್ವಿಂಟಾಲ್ ಬೀಜಗಳ ಅವಶ್ಯಕತೆ ಇದೆ. ಜಿಲ್ಲೆಯ ಸಹಕಾರಿ ಸಂಸ್ಥೆ ಮತ್ತು ಖಾಸಗಿ ವಿತರಕರಲ್ಲಿ 21,926 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, 13,525 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಕೊರೊನಾ ಸೋಂಕು ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಪ್ರತಿಯೊಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಬಳಸಲು ಕ್ರಮ ಕೈಗೊಳ್ಳಲಾಗಿದೆ.