ಸುರಪುರ: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲ್ಲೂಕಿನ ಕೆಂಭಾವಿ ಪಟ್ಟಣದಲ್ಲಿ ರೈತ ಹುತಾತ್ಮ ದಿನವನ್ನು ಆಚರಿಸಲಾಯಿತು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸಭೆ ಸೇರಿದ ರೈತ ಮುಖಂಡರು ಹುತಾತ್ಮ ರೈತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಮೂಲಕ ಹುತಾತ್ಮ ರೈತರಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೆಂಭಾವಿ ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತ ಈ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ರೈತನಿಗೆ ಸರ್ಕಾರಗಳು ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ಹಾಗೂ ರೈತರ ಬೇಡಿಕೆಗಳನ್ನು ಸರಿಯಾಗಿ ಈಡೇರಿಸದೆ ನಿರ್ಲಕ್ಷ ಮಾಡುತ್ತಿವೆ ಎಂದರು.
ರೈತರು ಹಿಂದೆಂದಿಗಿಂತಲೂ ಇಂದು ತೀವ್ರ ಸಂಕಷ್ಟದಲ್ಲಿದ್ದು ನಿತ್ಯವೂ ಕೂಡ ರೈತರ ಆತ್ಮಹತ್ಯೆಗಳು ಜರುಗುತ್ತಿವೆ. ಅಲ್ಲದೆ ರೈತರು ಬೀಜ, ಗೊಬ್ಬರ ಕ್ರಿಮಿನಾಶಕಗಳ ಖರೀದಿಯಲ್ಲಿ ಸಾಲದ ಸುಳಿಗೆ ಸಿಕ್ಕು ನಿತ್ಯ ನರಳುವಂತಾಗಿದೆ. ಆದರೆ ಸರ್ಕಾರಗಳು ಮಾತ್ರ ರೈತರನ್ನು ಕಡೆಗಣಿಸುವುದನ್ನು ಮುಂದುವರಿಸಿವೆ. ಇದರಿಂದ ಮುಂದೊಂದು ದಿನ ರೈತರು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿದಲ್ಲಿ ಎಲ್ಲರೂ ಹೊಟ್ಟೆಗೆ ಅನ್ನವಿಲ್ಲದೆ ಪರದಾಡಬೇಕಾದ ಸ್ಥಿತಿಗೆ ಬರಬೇಕಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅನೇಕ ಜನ ರೈತ ಮುಖಂಡರು ಹಾಗೂ ಹೋರಾಟಗಾರರು ಇದ್ದರು.