ಯಾದಗಿರಿ : ಉತ್ತರ ಕರ್ನಾಟಕದ ರೈತರ ಪ್ರಮುಖ ಹಬ್ಬವಾದ ಎಳ್ಳ ಅಮಾವಾಸ್ಯೆಯನ್ನು ಯಾದಗಿರಿ ಜಿಲ್ಲೆಯಾದ್ಯಂತ ರೈತರು ಸಂಭ್ರಮದಿಂದ ಆಚರಿಸಿದರು. ಎಳ್ಳ ಅಮಾವಾಸ್ಯೆ ರೈತಾಪಿ ವರ್ಗಕ್ಕೆ ವಿಶೇಷ ಹಬ್ಬ. ಹಬ್ಬದ ನಿಮಿತ್ತ ಕುಟುಂಬದ ಸದಸ್ಯರು ತಮ್ಮ ಸ್ನೇಹಿತರೊಂದಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಬುತ್ತಿ ಕಟ್ಟಿಕೊಂಡು, ಎತ್ತಿನ ಗಾಡಿಯಲ್ಲಿ ಹೊಲಕ್ಕೆ ತೆರಳಿ ಭೂಮಿ ತಾಯಿಗೆ ನೈವೇದ್ಯ ಅರ್ಪಿಸುವುದರ ಜೊತೆಗೆ ಪೂಜೆ ಸಲ್ಲಿಸುವುದು ವಿಶೇಷ.
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ವಿಶ್ವನಾಥ ಬಾಗ್ಲಿ ಕುಟುಂಬಸ್ಥರು ಹಾಗೂ ಬಂಧು - ಬಳಗದವರು ಜಮೀನಿಗೆ ಹೋಗಿ ಭೂತಾಯಿಗೆ ಸೀರೆಯೂಡಿಸಿ, ಬೆಳೆಗಳಿಗೆ ಚರಗ ಚಲ್ಲುವುದರ ಮೂಲಕ ಸಂಭ್ರಮ ಸಡಗರದಿಂದ ಎಳ್ಳ ಅಮಾವಾಸ್ಯೆ ಆಚರಿಸಿದರು. ಹೆಣ್ಣು ಮಕ್ಕಳು ಜೋಳದ ಹೊಲದಲ್ಲಿ ಬನ್ನಿ ಮರಕ್ಕೆ ಹಾಗೂ ಪಾಂಡವರಿಗೆ ಪೂಜೆ ಸಲ್ಲಿಸಿದರು. ನಂತರ ಎಲ್ಲರೂ ಮರದ ಕೆಳಗೆ ಕುಳಿತು ಹಬ್ಬಕ್ಕಾಗಿಯೇ ತಯಾರಿಸಿದ ಸಜ್ಜೆ ಗಡಬು, ಭರ್ತ, ಬಜ್ಜಿ, ಪುಂಡಿಪಲ್ಲೆ, ಹೋಳಿಗೆ, ಖಡಕ್ ರೊಟ್ಟಿ, ಶೇಂಗಾ ಹಿಂಡಿ, ಶಾವಿಗೆ ಪಾಯಸ, ಅನ್ನ- ಸಾಂಬರ್, ಹಪ್ಪಳ, ಸಂಡಿಗೆ ಸವಿದರು.
ಎಳ್ಳ ಅಮಾವಾಸ್ಯೆಯು ರೈತರ ಹಬ್ಬವಾಗಿದೆ. ಹಿರಿಯರು ಆಚರಿಸಿಕೊಂಡು ಬಂದಂತಹ ಈ ಹಬ್ಬವನ್ನು ನಾವು ಮುಂದುವರೆಸುತ್ತಿದ್ದೇವೆ. ಅಮಾವಾಸ್ಯೆಯಂದು ಮನೆಯನ್ನು ಸ್ವಚ್ಛಗೊಳಿಸಿ, ಸಿಹಿ ಪದಾರ್ಥಗಳನ್ನು ತಯಾರಿಸಿ ಎತ್ತಿನ ಬಂಡಿ ಅಥವಾ ಟ್ರ್ಯಾಕ್ಟರ್ ಸಿಂಗರಿಸಿ ಬುತ್ತಿ ಸಮೇತ ಹೊಲಕ್ಕೆ ತೆರಳಿ, ಭೂ ತಾಯಿಗೆ ನಮಿಸಿ ಫಸಲು ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸುವುದಾಗಿ ಕೋಲಿ ಸಮಾಜದ ಮುಖಂಡ ಉಮೇಶ್ ಕೆ. ಮುದ್ನಾಳ್ ತಿಳಿಸಿದರು.
ಇದನ್ನೂ ಓದಿ: ಬೀದರ್ ಜಿಲ್ಲೆಯಾದ್ಯಂತ ಎಳ್ಳ ಅಮಾವಾಸ್ಯೆಯ ಚರಗ ಚಲ್ಲುವ ಸಂಭ್ರಮ