ಸುರಪುರ(ಯಾದಗಿರಿ): ತಾಲೂಕಿನಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರು ಕಟಾವಿನ ನಂತರ ಗದ್ದೆಯಲ್ಲಿ ಉಳಿದ ಭತ್ತದ ಕೊಯ್ಲಿಗೆ ಬೆಂಕಿ ಹಚ್ಚುವ ಮೂಲಕ ಅವೈಜ್ಞಾನಿಕತೆ ತೋರುತ್ತಿದ್ದಾರೆ ಎಂದು ಪ್ರಗತಿಪರ ರೈತ ಹಾಗೂ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಮನವಿ ಮಾಡಿಕೊಂಡಿದ್ದಾರೆ.
ಭತ್ತದ ಕೊಯ್ಲು ಸುಡುವುದರಿಂದ ಅದರ ಬೂದಿ ಮಣ್ಣಿನೊಂದಿಗೆ ಬೆರೆತು ಮಣ್ಣಿನ ಸತ್ವ ಹೆಚ್ಚಾಗಲಿದೆ ಎಂಬ ನಂಬಿಕೆಯಿಂದಾಗಿ ಸುಡಲು ಮುಂದಾಗುತ್ತಿದ್ದಾರೆ. ಆದರೆ, ಕೊಯ್ಲಿಗೆ ಬೆಂಕಿ ಹಚ್ಚುವುದರಿಂದ ಶಾಖಕ್ಕೆ ಭೂಮಿಯೊಳಗಿನ ಎರೆಹುಳು, ಕೋಟ್ಯಂತರ ಬ್ಯಾಕ್ಟೀರಿಯಾಗಳು ಸಾವನ್ನಪ್ಪುತ್ತವೆ. ಇದರಿಂದ ಮಣ್ಣಿನ ಸತ್ವ ಕಡಿಮೆಗೊಳ್ಳುತ್ತದೆ. ಬದಲಿಗೆ ಗದ್ದೆಯಲ್ಲಿ ನೀರು ನಿಲ್ಲಿಸಿ ಭತ್ತದ ಕೊಯ್ಲು ಕೊಳೆಸಿದರೆ ಅದರಿಂದ ಭೂಮಿಗೆ ಉತ್ತಮ ಗೊಬ್ಬರ ಲಭಿಸಿ ಫಲವತ್ತತೆ ಹೆಚ್ಚಾಗಲಿದೆ. ಕೊಯ್ಲು ಸುಡುವ ಮೂಲಕ ರೈತರು ಉತ್ತಮ ಇಳುವರಿ ಬದಲು ತಮ್ಮ ಬದುಕನ್ನ ತಾವೇ ಸುಟ್ಟುಕೊಳ್ಳುತ್ತಿದ್ದಾರೆ ಎಂದು ಪ್ರಗತಿಪರ ರೈತ ಹಾಗೂ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಅಭಿಪ್ರಾಯಪಟ್ಟಿದ್ದಾರೆ.
ಭತ್ತದ ಕಟಾವಿನ ನಂತರ ಎಲ್ಲ ಗ್ರಾಮಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಭೇಟಿ ನೀಡಿ ರೈತರಲ್ಲಿ ಜಾಗೃತಿ ಮೂಡಿಸಬೇಕು. ಆದರೆ ಕೃಷಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಭತ್ತದ ಗದ್ದೆಗಳಿಗೆ ಬೆಂಕಿ ಹಾಕಿ ರೈತರು ಮಣ್ಣಿನ ಸಾರವನ್ನು ಸಾಯಿಸುತ್ತಿದ್ದಾರೆ. ಇನ್ನಾದರೂ ರೈತರು ಭತ್ತದ ಕೊಯ್ಲಿಗೆ ಬೆಂಕಿ ಹಚ್ಚದಂತೆ ಪ್ರಗತಿಪರ ರೈತ ಹಾಗೂ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ರೈತರಲ್ಲಿ ಮನವಿ ಮಾಡಿದ್ದಾರೆ.