ಸುರಪುರ: ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸೋಂಕಿನ ಕುರಿತು ಸುಳ್ಳು ಸುದ್ದಿ ಹರಬಿಟ್ಟಿದ್ದ ಪ್ರತ್ಯೇಕ ಎರಡು ಪ್ರಕಣರಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಇನ್ನೊಬ್ಬನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ದೇಶಾದ್ಯಂತ ಆಂತಕ ಸೃಷ್ಟಿಸಿರುವ ಕೊರೊನಾ ಸೋಂಕಿನ ಹೆಸರು ಕೇಳಿದರೂ ಜನತೆ ಬೆಚ್ಚಿಬೀಳುವಂತಾಗಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡುವ ಕಿಡಿಗೇಡಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಇದುವರೆಗೂ ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಆದರೆ, ಶನಿವಾರ ಸಂಜೆ ಸಾಮಾಜಿಕ ಜಾಲತಾಣದ ಗ್ರುಪ್ನಲ್ಲಿ ಕಿಡಿಗೇಡಿ ಯುವಕನೊಬ್ಬ ತಿಮ್ಮಾಪುರದಲ್ಲಿ ಮೂರು ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಅವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಸುಳ್ಳು ಪೋಸ್ಟ್ ಹಾಕಿದ್ದು, ಈ ಸುದ್ದಿ ಕಾಡ್ಗಿಚ್ಚಿನಂತೆ ತಾಲೂಕಿನಾದ್ಯಂತ ಹರಡಿದೆ. ಈ ಯುವಕನ ಬಂಧನಕ್ಕೆ ಪೊಲೀಸರು ಬೆನ್ನು ಬಿದ್ದಿದ್ದಾರೆ.
ಇನ್ನೊಂದು ಕಡೆ ಒಂದು ಕೋಮಿನವರ ಚಿತ್ರ ಬಳಸಿ ಇವರೆಲ್ಲರಿಗೂ ಕೊರೊನಾ ಪಾಸಿಟಿವ್ ಇದೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಲಾಗಿದೆ. ಒಂದು ಕೋಮಿನ ಮೇಲೆ ಪ್ರಚೋದನೆಗೆ ಮುಂದಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.