ಸುರಪುರ(ಯಾದಗರಿ): ತಾಲೂಕಿನ ದೇವಿಕೇರಾ ಗ್ರಾಮದಲ್ಲಿನ ಒಂದೇ ಕುಟುಂಬದಲ್ಲಿ ನಾಲ್ಕು ಜನ ಬುದ್ಧಿಮಾಂದ್ಯ ಮಕ್ಕಳಿರುವ ಕುಟುಂಬಕ್ಕೆ ವೀರಶೈವ ಲಿಂಗಾಯತ ಯುವ ವೇದಿಕೆ ಸೂರು ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ.
ಇದು ಈಟಿವಿ ಭಾರತ ವರದಿಯ ಫಲಶ್ರುತಿಯಾಗಿದೆ. ದೇವಿಕೇರಾ ಗ್ರಾಮದಲ್ಲಿನ ಒಂದೇ ಕುಟುಂಬದಲ ನಾಲ್ವರು ಬುದ್ಧಿಮಾಂದ್ಯ ಮಕ್ಕಳಿರುವ ಕುಟುಂಬದ ಸಂಕಷ್ಟ ಹಾಗೂ ಇರಲು ಮನೆ ಇಲ್ಲ ಎಂದು ಈಟಿವಿ ಭಾರತ, ವಿಶ್ವ ತಾಯಂದಿರ ದಿನದ ಅಂಗವಾಗಿ ವರದಿ ಪ್ರಸಾರ ಮಾಡಿತ್ತು. ಈ ವರದಿಗೆ ಸ್ಪಂದಿಸಿರುವ ವೀರಶೈವ ಲಿಂಗಾಯತ ಯುವ ವೇದಿಕೆ ಈ ಕುಟುಂಬಕ್ಕೆ ಮನೆಯನ್ನು ದುರಸ್ತಿಮಾಡಿಸಿ ಕೊಟ್ಟಿದೆ.
ಶ್ರೀ ಸಿದ್ದಗಂಗಾ ನಿಲಯ ಎಂಬ ಹೆಸರಲ್ಲಿ ಮನೆ ದುರಸ್ತಿಗೊಳಿಸಿ ಇಂದು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ.
ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸುರಪುರ ಠಾಣೆ ಪಿಎಸ್ಐಗಳಾದ ಚೇತನ್, ಚಂದ್ರಶೇಖರ ನಾರಾಯಣಪುರ ಹಾಗೂ ಮುಖಂಡರಾದ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.