ಸುರಪುರ (ಯಾದಗಿರಿ): ಕೊರೊನಾ ಲಾಕ್ಡೌನ್ ಜಾರಿಯಾದ ಬಳಿಕ ಅನಗತ್ಯ ವಾಹನ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಅಲ್ಲದೇ ಅಗತ್ಯ ಸೇವೆ ಸಲ್ಲಿಸುವ ವಾಹನಗಳಿಗೆ ಜಿಲ್ಲಾಡಳಿತದಿಂದ ಪಾಸ್‌ಗಳನ್ನು ವಿತರಿಸಲಾಗಿತ್ತು.
ಅದರಂತೆ ಸುರಪುರ ನಗರದಲ್ಲಿನ ಹಾಲು, ತರಕಾರಿ ಮಾರಾಟ ಮಾಡುವವರು, ಅಗತ್ಯ ಸೇವೆ ಸಲ್ಲಿಸುವವರು ಮತ್ತು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವವರಿಗೆ ತಾಲೂಕು ಆಡಳಿತ ಮತ್ತು ನಗರಸಭೆಯ ವತಿಯಿಂದ ಪಾಸ್‌ಗಳನ್ನು ವಿತರಿಸಲಾಗಿತ್ತು.
ಆದರೆ, ಈ ಪಾಸ್‌ಗಳನ್ನು ನಕಲು ಮಾಡಿ ವಿತರಣೆ ಮಾಡಿರುದ ಶಂಕೆ ಹಿನ್ನೆಲೆ ಫ್ಲೆಯಿಂಗ್ ಸ್ಕ್ವಾಡ್ ಮೂವರ ವಿರುದ್ಧ ದೂರು ದಾಖಲಿಸಿದೆ. ನಗರಸಭೆ ಕಚೇರಿ ಬಳಿಯ ಶಶಿ ಜೆರಾಕ್ಸ್ ಅಂಗಡಿಯಲ್ಲಿ ನಕಲಿ ಪಾಸ್‌ಗಳನ್ನು ಜೆರಾಕ್ಸ್ ಮಾಡಿ ಜನರಿಗೆ ವಿತರಿಸುತ್ತಿದ್ದಾರೆ ಎಂದು ಆರೋಪಿಸಿ ಮೂವರ ವಿರುದ್ಧ ದೂರು ದಾಖಲಾಗಿದೆ.
ಜೆರಾಕ್ಸ್ ಅಂಗಡಿ ಮಾಲೀಕ ಹಾಗೂ ನಗರಸಭೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ಒಟ್ಟು ಮೂರು ಜನರ ವಿರುದ್ಧ ಫ್ಲೆಯಿಂಗ್ ಸ್ಕ್ವಾಡ್ ಮೌನೇಶ್ ಕಂಬಾರ ಅವರು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಕಲಿ ಪಾಸ್‌ಗಳನ್ನು ಪಡೆದು ಜನರು ಪೊಲೀಸ್ ಇಲಾಖೆಗೆ ಹಾಗೂ ಜಿಲ್ಲಾಡಳಿತದ ನಿಯಮಗಳ ಉಲ್ಲಂಘಿಸಿ ಓಡಾಡುತ್ತಿದ್ದಾರೆ ಎಂದು ಜನರು ಹಿಂದಿನಿಂದಲೂ ಆರೋಪಿಸುತ್ತಿದ್ದರು. ಆದರೆ, ಈಗ ನಕಲಿ ಪಾಸ್ ಮಾಡಿಕೊಡುತ್ತಿದ್ದಾರೆಂದು ಆರೋಪಿಸಿ ದೂರು ದಾಖಲಿಸಲಾಗಿದೆ ಈ ಪ್ರಕರಣ ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂದು ಕಾದು ನೋಡಬೇಕಿದೆ.