ಯಾದಗಿರಿ: ಕೋವಿಡ್ ತಪಾಸಣೆ ವೇಳೆ ಲಾರಿ ಚಾಲಕನೊಬ್ಬ ಬ್ಯಾರಿಕೇಡ್‌ಗೆ ವಾಹನ ಗುದ್ದಿಸಿ ಚೆಕ್‌ಪೋಸ್ಟ್ ನಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಲಾರಿ ಹರಿಸಲು ಯತ್ನಿಸಿದ ಘಟನೆ ತಾಲೂಕಿನ ಯರಗೋಳದಲ್ಲಿ ನಡೆದಿದೆ.
ಯರಗೋಳ ಚೆಕ್ ಪೋಸ್ಟ್ನಲ್ಲಿ ಲಾರಿ ಚಾಲಕನಿಗೆ ಕೋವಿಡ್ ನೆಗೆಟಿವ್ ವರದಿ ಕೇಳಲು ಪೊಲೀಸರು ಮುಂದಾದಾಗ ಕಾನ್ಸ್ಟೇಬಲ್ ಮಾತು ಕೇಳದೇ ಚಾಲಕ ಲಾರಿ ಹಾಯಿಸಲು ಯತ್ನಿಸಿದ್ದಾನೆ. ಈ ವೇಳೆ, ಲಾರಿ ತಡೆದ ಪೊಲೀಸ್ ಕಾನ್ಸ್ಟೇಬಲ್ ಬಸವರಾಜ, ಮೊದಲು ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸಿ, ಇಲ್ಲವೇ ಕೋವಿಡ್ ಟೆಸ್ಟ್ ಮಾಡಿಕೊಂಡು ಹೋಗಬೇಕೆಂದು ಖಡಕ್ ಎಚ್ಚರಿಕೆ ನೀಡಿದರು.
ಇದಕ್ಕೆ ಲಾರಿ ಚಾಲಕ, ನಾನೇಕೆ ರಿಪೋರ್ಟ್ ತೋರಿಸಬೇಕೆಂದು ಫುಲ್ ಆವಾಜ್ ಹಾಕಿ ಕಾನ್ಸ್ಟೇಬಲ್ಗೆ ಬೆದರಿಸಿದ್ದಾನೆ. ರಾಜಸ್ಥಾನದಿಂದ ಯಾದಗಿರಿ ಕಡೆಗೆ ಲಾರಿ ಬರುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ.. 3 ಕೃಷಿ ಕಾನೂನುಗಳು ವಾಪಸ್!
ನಂತರ ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಸೇರಿ ಲಾರಿ ಚಾಲಕನನ್ನು ಕೆಳಗಿಳಿಸಿ, ಕೋವಿಡ್ ಟೆಸ್ಟ್ ಮಾಡಿಸಿ ನಂತರ ಜಿಲ್ಲೆಯೊಳಗೆ ತೆರಳಲು ಬಿಟ್ಟರು.
ಹೊಸ ರೂಪಾಂತರಿ ತಳಿ ವೈರಸ್ ಪತ್ತೆಯಾದ ಹಿನ್ನೆಲೆ ಯಾದಗಿರಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಗಡಿಭಾಗದ ಚೆಕ್‌ಪೋಸ್ಟ್ ಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಯರಗೋಳ ಚೆಕ್ ಪೋಸ್ಟ್ನಲ್ಲಿ ಮಹಾರಾಷ್ಟ್ರ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಚೆಕ್‌ಪೋಸ್ಟ್ ಸಿಬ್ಬಂದಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಯೇ ಬಿಡುತ್ತಿದ್ದಾರೆ.