ಯಾದಗಿರಿ : ಸಮೀಪದ ನಾಲ್ವಡಿಗಿ ಗ್ರಾಮದಲ್ಲಿ 2018-19ರಲ್ಲಿ ಎನ್‌ಆರ್‌ಡಿಡಬ್ಲ್ಯೂಪಿ ಯೋಜನೆಯಡಿಯಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಬಳಕೆಯಾಗಿಲ್ಲ. ನೀರಿನ ಟ್ಯಾಂಕ್ ಪಾಳು ಬಿದ್ದಂತಾಗಿದೆ. ಇದುವರೆಗೂ ಒಂದು ಹನಿ ನೀರು ಕಂಡಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಭವನದಿಂದ 13 ಕಿ.ಮೀ ದೂರದಲ್ಲಿರುವ ನಾಲ್ವಡಗಿ ಗ್ರಾಮದಲ್ಲಿ 400 ಮನೆಗಳಿವೆ. 600 ಮತದಾರರಿದ್ದಾರೆ. 2000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಪಕ್ಕದಲ್ಲೇ ಭೀಮಾನದಿ ಹರಿಯುತ್ತದೆ. ನೀರಿನ ಟ್ಯಾಂಕ್ ನಿರ್ಮಿಸಿದಾಗಿನಿಂದ 2 ಲೀಟರ್ ನೀರು ಬಳಕೆಯಾಗಿಲ್ಲ. ಇದಕ್ಕೆ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರತಿ ವರ್ಷ ಜಿಲ್ಲಾ, ತಾಲೂಕು, ಕೆಡಿಪಿ, ಜಿಪಂ ಸಾಮಾನ್ಯ ಸಭೆ, ದಿಶಾ ಸಭೆಗಳು ನಡೆಯುತ್ತಿದ್ದರೂ ಅಲ್ಲಿ ಗ್ರಾಮದ ಕುಡಿಯುವ ನೀರಿನ ಬಗ್ಗೆ ಚರ್ಚೆ ಆಗಿಲ್ಲ. ಅಧಿಕಾರಿಗಳು ಸಭೆಯ ಗಮನಕ್ಕೆ ತರದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕೋಲಿ ಸಮಾಜದ ಮುಖಂಡ ಉಮೇಶ ಕೆ. ಮುದ್ನಾಳ್ ದೂರಿದ್ದಾರೆ.
ಗ್ರಾಮದ ಜನತೆಗೆ ಅನುಕೂಲವಾಗಲೆಂದು ರೈತರು ಉಚಿತವಾಗಿ ಜಮೀನು ನೀಡಿದ್ದಾರೆ. ಅಲ್ಲದೇ, ಪಕ್ಕದಲ್ಲೇ ಕೊಳವೆ ಬಾವಿ ಇದ್ದು, ನೀರಿನ ಪುನರ್ ಸ್ಥಾಪನೆಗೆ ಅಧಿಕಾರಿಗಳು ಮುಂದಾಗಿಲ್ಲ. ಇದೀಗ ಬೇಸಿಗೆ ಆರಂಭವಾಗುತ್ತಿದೆ. ಕುಡಿಯವ ನೀರು ಕೊಡದಿದ್ದರೆ ಜನತೆಗೆ ಸಂಕಷ್ಟ ಉಂಟಾಗುತ್ತದೆ. ಕೂಡಲೇ ಕ್ರಮಕ್ಕೆ ಮುಂದಾಗಿ ಸಮಸ್ಯೆ ಇತ್ಯರ್ಥಗೊಳಿಸದೇ ಇದ್ದಲ್ಲಿ ವಿಜಯಪುರ-ಹೈದರಾಬಾದ್ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಓದಿ: ಶೇ. 40 ಕಮಿಷನ್ ಆರೋಪ ಮೇಲೆ ಚರ್ಚೆಗೆ ಅವಕಾಶ ನಿರಾಕರಣೆ : ಸಿಎಂ ಬೊಮ್ಮಾಯಿ-ಸಿದ್ದರಾಮಯ್ಯ ಜಟಾಪಟಿ