ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ, ಭೇದಿ ಉಲ್ಬಣಗೊಂಡು ಮಹಿಳೆಯರಿಬ್ಬರು ಮೃತಪಟ್ಟಿದ್ದು, 23ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ. ಗ್ರಾಮಕ್ಕೆ ನೀರು ಪೂರೈಸುವ ಪೈಪ್ನಲ್ಲಿ ಚರಂಡಿ ನೀರು ಸೇರ್ಪಡೆಯಾಗಿರುವ ಪರಿಣಾಮ ಅನಾರೋಗ್ಯ ಉಂಟಾಗಿದೆ.
ನಿನ್ನೆ 24, ಇಂದು 6 ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಮಂಗಳವಾರ ವಾಂತಿ ಬೇಧಿಯಿಂದ ಬಳಲುತ್ತಿದ್ದವರನ್ನು ತಡ ರಾತ್ರಿ ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಸುಕಿನ ಜಾವ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಸಾವಿತ್ರಮ್ಮ (35) ಎಂದು ಗುರುತಿಸಲಾಗಿದೆ. ವಾಂತಿ ಭೇದಿ ಉಲ್ಬಣಗೊಂಡು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 13 ಜನ ದಾಖಲಾಗಿದ್ದಾರೆ. ತೆಲಂಗಾಣದ ನಾರಾಯಣಪೇಟೆಯಲ್ಲಿ 8, ಮೆಹಬೂಬ್ನಗರದ ಖಾಸಗಿಯಲ್ಲಿ 4 ವರ್ಷದ ಬಾಲಕ ದಾಖಲಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ವೈದ್ಯರ ತಂಡ ಬಿಡಾರ ಹೂಡಿದೆ.
ಅನಪುರ ಗ್ರಾಮಕ್ಕೆ ಡಿಹೆಚ್ಓ ಡಾ. ಗುರುರಾಜ ಹಿರೇಗೌಡ, ಟಿಹೆಚ್ಒ ಡಾ. ಹಣಮಂತರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. "ಮೇಲ್ನೋಟಕ್ಕೆ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಕಾಣಿಸಿಕೊಂಡಿರುವ ಅನುಮಾನ ಇದೆ. ಸಾವಿತ್ರಮ್ಮ, ಸಾಯಮ್ಮ ಕಲುಷೀತ ನೀರು ಸೇವಿಸಿ ಮೃತಪಟ್ಟಿರುವ ಶಂಕೆ ಇದೆ. ಈ ಬಗ್ಗೆ ನೀರಿನ ಸ್ಯಾಂಪಲ್ ವರದಿ ನಂತರ ಗೊತ್ತಾಗಲಿದೆ" ಎಂದು ಡಿಎಚ್ಒ ಡಾ.ಗುರುರಾಜ ಹಿರೇಗೌಡ ಅವರು ತಿಳಿಸಿದ್ದಾರೆ.
ಮರುಕಳಿಸಿದ ವರ್ಷದ ಹಿಂದಿನ ಘಟನೆ: ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಯಾದಗಿರಿ ಮತ್ತು ಬೆಳಗಾವಿಯಲ್ಲಿ ಕಲುಷಿತ ನೀರು ಸೇವಿ ಅನೇಕ ಜನ ಅಸ್ವಸ್ಥರಾಗಿದ್ದರು. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊತಪೇಟೆ ಗ್ರಾಮದಲ್ಲಿ ಕಳೆದ ವರ್ಷ ಕುಡಿಯುವ ನೀರು ಕಲುಷಿತವಾಗಿ ಸೇರಿ 200ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೆ ಬಾಧಿತರಾಗಿದ್ದರು ಮತ್ತು ಮೂವರು ವಿಪರೀತ ಆಮಶಂಕೆಯಿಂದ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಶಹಾಪುರದಲ್ಲಿ ಕಲುಷಿತ ನೀರು ಕುಡಿದು ವೃದ್ಧೆ ಸಾವು.. 40 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಗ್ರಾಮದಲ್ಲಿ ತೆರೆದ ಬಾವಿಯ ಮೂಲಕ ಅಲ್ಲಿನ ಟ್ಯಾಂಕರ್ಗೆ ನೀರು ಪೂರೈಕೆಯಾಗಿದ್ದು, ಟ್ಯಾಂಕರ್ ನೀರು ನಲ್ಲಿ ಮೂಲಕ ಮನೆ ಮನೆಗಳಿಗೆ ಸರಬರಾಜು ಮಾಡಿದ ಕಾರಣ ಜನರಿಗೆ ಅನಾರೋಗ್ಯ ಉಂಟಾಗಿತ್ತು. ನಂತರ ಗ್ರಾಮದ ಜನರಿಗೆ ಹೊರಗಿನಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ 200ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಬೆಳಗಾವಿಯಲ್ಲೂ ಮಲಿನ ನೀರಿನಿಂದ ಅನಾರೋಗ್ಯ: ಬೆಳಗಾವಿಯಲ್ಲಿಯೂ ಕಳೆದ ವರ್ಷ ಅಕ್ಟೋಬರ್ನಲ್ಲಿ ಕಲುಷಿತ ನೀರಿನಿಂದ ಒಂದು ಗ್ರಾಮದ 94 ಕ್ಕೂ ಹೆಚ್ಚು ಜನ ಅನಾರೋಗ್ಯ ಪೀಡಿತರಾಗಿದ್ದರು. ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಪೈಪ್ ಒಡೆದು ಕುಡಿವ ನೀರಿಗೆ ಕಲಷಿತ ನೀರು ಮಿಕ್ಸ್ ಆಗುತ್ತಿತ್ತು. ಈ ನೀರನ್ನು ಸೇವಿಸಿ ಬಸವಣ್ಣ ದೇವರ ಗುಡಿ ಓಣಿ, ಲಕ್ಕಮ್ಮದೇವಿ ಗುಡಿ ಓಣಿ, ಬೀರದೇವರ ಗುಡಿ ಓಣಿಯ 94 ಜನರು ಅಸ್ವಸ್ಥಗೊಂಡಿದ್ದರು. ಬೆಳಗಾವಿಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಓರ್ವ ವೃದ್ಧ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 10ಲಕ್ಷ ಪರಿಹಾರವನ್ನೂ ಘೋಷಣೆ ಮಾಡಿತ್ತು.
ಇದನ್ನೂ ಓದಿ: ಬೆಳಗಾವಿಯಲ್ಲಿ ಕಲುಷಿತ ನೀರು ಸೇವನೆ: ವೃದ್ಧ ಸಾವು, ನಾಲ್ವರು ಸ್ಥಿತಿ ಚಿಂತಾಜನಕ