ಯಾದಗಿರಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವಲಸೆ ಕಾರ್ಮಿಕರನ್ನು ಕೋವಿಡ್-19 ಸಂಬಂಧ 14 ದಿನಗಳವರೆಗೆ ಕ್ವಾರಂಟೈನ್ ಮಾಡುವ ಸಲುವಾಗಿ ಶಹಾಪುರ ತಾಲೂಕಿನಲ್ಲಿ ಹೊಸದಾಗಿ ಗುರುತಿಸಲಾದ ಮತ್ತು ಈಗಾಗಲೇ ಕ್ವಾರಂಟೈನ್ ಮಾಡಲಾದ ವಿವಿಧ ವಸತಿ ನಿಲಯ, ಶಾಲಾ-ಕಾಲೇಜು ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಭೇಟಿ ನೀಡಿ ಪರಿಶೀಲಿಸಿದರು.
ಶಹಾಪುರ ತಾಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ನಂತರ ವಿದ್ಯಾರ್ಥಿನಿಯರ ಹಾಸ್ಟೆಲ್ ಪರಿಶೀಲಿಸಿದರು. ನಂತರ ಹೋತಪೇಟದ ಜವಾಹರ ನವೋದಯ ವಸತಿ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಬೇಕಾದ ಮೂಲ ಸೌಕರ್ಯಗಳಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.
ತದನಂತರ ಶಹಾಪುರ ಬಾಪುಗೌಡ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಮತ್ತು ಭೀಮರಾಯನಗುಡಿಯಲ್ಲಿರುವ ಕೆಬಿಜೆಎನ್‍ಎಲ್ ವಸತಿ ಕಟ್ಟಡಗಳಿಗೆ ಭೇಟಿ ನೀಡಿದರು. ಕೊನೆಯಲ್ಲಿ ಕನ್ಯಾಕೋಳೂರು ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್‍ಗೆ ಭೇಟಿ ನೀಡಿ, ಸದರಿ ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕರಿಗೆ ನೀಡುತ್ತಿರುವ ಆಹಾರ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.