ಸುರಪುರ: ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುತ್ತಿರುವ ಪಡಿತರ ಧಾನ್ಯಗಳಲ್ಲಿ ಹುಳು ತುಂಬಿ ಜುಂಡಿಗಟ್ಟಿವೆ. ಇಂತಹ ಧಾನ್ಯಗಳನ್ನು ವಿತರಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿರುದ್ಧ ತಾಲೂಕಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಬೋನಾಳ ಗ್ರಾಮದಲ್ಲಿನ ಪಡಿತರ ಅಂಗಡಿಯಲ್ಲಿ ವಿತರಿಸುತ್ತಿರುವ ಅಕ್ಕಿ ಸಂಪೂರ್ಣ ಹುಳಗಳಿಂದ ತುಂಬಿದ್ದು, ಎಲ್ಲಾ ಚೀಲಗಳು ಹಾಳಾಗಿ ಹೋಗಿವೆ. ಇಂತಹ ಅಕ್ಕಿಯನ್ನು ನೀಡುತ್ತಿರುವ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಪಡಿತರದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇಂತಹ ಅಕ್ಕಿಯನ್ನು ಪ್ರಾಣಿಗಳು ಕೂಡ ತಿನ್ನುವುದಿಲ್ಲ. ಅಂಥದ್ದರಲ್ಲಿ ಮನುಷ್ಯ ತಿನ್ನಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಪಡಿತರ ಅಂಗಡಿಯವರು ಹೇಳುವ ಪ್ರಕಾರ, ಸರ್ಕಾರದಿಂದಲೇ ಇಂತಹ ಅಕ್ಕಿ ಸರಬರಾಜಾಗಿದೆ. ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡ ಇಂತಹ ಅಕ್ಕಿಯನ್ನೇ ನೀಡಲಾಗುತ್ತದೆ. ಹಾಗಾಗಿ ನಾವು ಏನೂ ಮಾಡಲಾಗುವುದಿಲ್ಲ. ಸರ್ಕಾರ ನೀಡಿದಂತಹ ಅಕ್ಕಿಯನ್ನು ನಾವು ನೀಡುತ್ತಿದ್ದೇವೆ ಎಂದು ಜಾರಿಕೊಳ್ಳುತ್ತಿದ್ದಾರೆ.
ಒಂದೆಡೆ ಜನರಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವುದಾಗಿ ಸರ್ಕಾರ ಹೇಳುತ್ತದೆ. ಮತ್ತೊಂದೆಡೆ ಹುಳು ತುಂಬಿದ, ಕೆಟ್ಟು ಹೋದ ಪಡಿತರ ಪದಾರ್ಥಗಳನ್ನು ನೀಡುತ್ತಿದ್ದಾರೆ. ಇಂತಹ ಪಡಿತರ ತಿಂದರೆ ಜನರು ಆರೋಗ್ಯದಿಂದ ಇರಲು ಸಾಧ್ಯವೇ? ಆದ್ದರಿಂದ ಕೂಡಲೇ ಎಲ್ಲಾ ರೇಷನ್ ಅಂಗಡಿಗಳಲ್ಲಿನ ಅಕ್ಕಿಯನ್ನು ಮರಳಿ ಪಡೆದು ಸ್ವಚ್ಛವಾದ ಅಕ್ಕಿ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಪರ ಹೋರಾಟಗಾರ ರಾಹುಲ್ ಹುಲಿಮನಿ ಬೋನಾಳ ಎಚ್ಚರಿಸಿದ್ದಾರೆ.