ಯಾದಗಿರಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುವ ನೀರಿನ ಪ್ರಮಾಣ ಇಳಿಮುಖವಾಗಿದ್ದರಿಂದ ನದಿ ಪಾತ್ರದ ಜನರಿಗೆ ಈಗ ಪ್ರವಾಹ ಭೀತಿ ತಗ್ಗಿದಂತಾಗಿದೆ.
ಮಹಾರಾಷ್ಟ್ರದಲ್ಲಿನ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಇರುವ ಬಸವಸಾಗರ ಜಲಾಶಯ ಭರ್ತಿ ಆಗುವ ಮೂಲಕ ಒಳಹರಿವು ಹೆಚ್ಚಾಗಿತ್ತು. ಈ ಹಿನ್ನೆಲೆ ಪ್ರತಿನಿತ್ಯ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿತ್ತು. ಕಳೆದ ಒಂದು ವಾರದ ಹಿಂದಷ್ಟೇ 2 ಲಕ್ಷ 95 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನ ನದಿಗೆ ಹರಿ ಬಿಡಲಾಗಿತ್ತು.
ಇದರಿಂದಾಗಿ ಕೃಷ್ಣಾ ನದಿ ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುವ ಮೂಲಕ ನದಿ ತೀರದ ಜಮೀನುಗಳಿಗೆ ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ರೈತರ ಬೆಳೆ ಹಾನಿಯಾಗಿತ್ತು. ಅದಲ್ಲದೆ ಶಹಪುರ ತಾಲೂಕಿನ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೊಳ್ಳೂರು ಸೇತುವೆ ಮುಳಗುವ ಮೂಲಕ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಹ ಭೀತಿಯಲ್ಲಿದ್ದ ಶಹಪುರ, ಸುರಪುರ ಮತ್ತು ಹುಣಸಗಿ ತಾಲೂಕಿನ ಜನರಿಗೆ ಈಗ ಸ್ವಲ್ಪ ಪ್ರವಾಹದ ಭೀತಿ ತಗ್ಗಿದೆ.
ಬಸವಸಾಗರ ಜಲಾಶಯದಿಂದ ಈಗ ಕೃಷ್ಣಾ ನದಿಗೆ ಜಲಾಶಯದ 6 ಗೇಟ್ ಮೂಲಕ 69,480 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಉಕ್ಕಿ ಹರಿಯುತ್ತಿದ್ದ ಕೃಷ್ಣಾ ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಜಲಾವೃತಗೊಂಡಿದ್ದ ಕೊಳ್ಳೂರು ಸೇತುವೆ ಕೂಡ ಈಗ ಸಂಚಾರಕ್ಕೆ ಮುಕ್ತವಾಗಿದೆ. ಒಟ್ಟು 33.313 ಟಿಎಂಸಿ ಸಾಮರ್ಥ್ಯ ಹೊಂದಿದ ಬಸವಸಾಗರ ಜಲಾಶಯದಲ್ಲೀಗ 29.53 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಒಳಹರಿವು 1 ಲಕ್ಷ ಕ್ಯೂಸೆಕ್ ಇದೆ.