ಯಾದಗಿರಿ: ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಲಾಕ್‍ಡೌನ್ ತೆರವು-3ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಅನ್‍ಲಾಕ್-3 ಆಗಸ್ಟ್ 1ರಿಂದ ಜಾರಿಗೊಂಡು ಆಗಸ್ಟ್ 31ರವರೆಗೆ ಚಾಲ್ತಿಯಲ್ಲಿರುವುದಾಗಿ ಅವರು ತಿಳಿಸಿದರು.
ಕಂಟೇನ್‍ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಈ ಕೆಳಗಿನವುಗಳನ್ನು ಹೊರತುಪಡಿಸಿ ಎಲ್ಲ ಚಟುವಟಿಕೆಗಳನ್ನು ಅನುಮತಿಸಲಾಗುವುದು. ಶಾಲೆ- ಕಾಲೇಜು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು ಆ.31 ರವರೆಗೆ ಮುಚ್ಚಲ್ಪಡುತ್ತವೆ. ಆನ್‍ಲೈನ್/ ದೂರ ಶಿಕ್ಷಣ ಕಲಿಕೆಗಳಿಗೆ ಅನುಮತಿಸುವುದನ್ನು ಮುಂದುವರಿಸಲಾಗುವುದು ಮತ್ತು ಪ್ರೋತ್ಸಾಹಿಸಲಾಗುವುದು. ಸಿನಿಮಾ ಮಂದಿರ, ಈಜು ಕೊಳ, ಮನೋರಂಜನಾ ಉದ್ಯಾನವನ, ಚಿತ್ರಮಂದಿರ, ಬಾರ್ ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್ ಮತ್ತು ಅಂತಹುದೇ ಸ್ಥಳಗಳು ತೆರೆಯುವಂತಿಲ್ಲ ಎಂದು ತಿಳಿಸಿದರು.
ಯೋಗ ಕೇಂದ್ರಗಳನ್ನು ಮತ್ತು ಜಿಮ್ನಾಷಿಯಂಗಳನ್ನು ತೆರೆಯಲು ಆ.5 ರಿಂದ ಅನುಮತಿಸಲಾಗುವುದು. ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಮತ್ತು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯ ವಿಧಾನ (ಎಸ್‍ಒಪಿ)ಯನ್ನು ಹೊರಡಿಸಲಾಗುವುದು. ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಸಂತೆ, ಜಾತ್ರೆಗಳು ಇತರ ಬೃಹತ್ ಸಭೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದರು.
ಈ ಮೇಲಿನ ಕಾರ್ಯಚಟುವಟಿಕೆಗಳನ್ನು ಪುನಾರಂಭಿಸುವುದಕ್ಕೆ ಭಾರತ ಸರ್ಕಾರವು ಪ್ರತ್ಯೇಕವಾಗಿ ದಿನಾಂಕವನ್ನು ನಿರ್ಣಯಿಸಬಹುದು ಮತ್ತು ಭಾರತ ಸರ್ಕಾರದ ಸಂಬಂಧಪಟ್ಟ ಮಂತ್ರಾಲಯಗಳಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಅಗತ್ಯ ಪ್ರಮಾಣಿತ ಕಾರ್ಯ ವಿಧಾನ (ಎಸ್‍ಒಪಿ)ಯನ್ನು ಹೊರಡಿಸಬಹುದು ಎಂದು ತಿಳಿಸಿದರು.
ಕೋವಿಡ್-19 ವ್ಯಾಪಕ ಪರೀಕ್ಷೆ: ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಪಾಸಿಟಿವ್ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿದಲ್ಲಿ ಅವರನ್ನು ಗುಣಪಡಿಸಲು ಮತ್ತು ಇತರರಿಗೆ ಹರಡುವುದನ್ನು ತಪ್ಪಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಟ್ರೂನ್ಯಾಟ್, ಆರ್‍ಟಿಪಿಸಿಆರ್ ಲ್ಯಾಬ್‍ನಲ್ಲಿ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ.
ಅಲ್ಲದೇ, ಆರೋಗ್ಯ ಇಲಾಖೆಯಿಂದ ಸ್ಥಳದಲ್ಲಿಯೇ ಕೋವಿಡ್ ವರದಿ ನೀಡುವಂತಹ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕೂಡ ಮಾಡಲಾಗುತ್ತಿದ್ದು, ಬಾಣಂತಿಯರು, ಕೊರೊನಾ ಪಾಸಿಟಿವ್ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವವರು, 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ತೊಂದರೆ, ಅಸ್ತಮಾ, ಹೃದಯ ಸಮಸ್ಯೆ ಹಾಗೂ ಇನ್ನಿತರ ಮಾರಣಾಂತಿಕ ಕಾಯಿಲೆಗಳಿದ್ದವರು ಪರೀಕ್ಷೆ ಮಾಡಿಸಿಕೊಳ್ಳಲು ಅವರು ಕೋರಿದರು.
ಶಿಷ್ಟಾಚಾರದಂತೆ ಸ್ವಾತಂತ್ರ್ಯ ದಿನಾಚರಣೆ: ಬರುವ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತ ಸರ್ಕಾರದ ಗೃಹ ಮಂತ್ರಾಲಯವು ಹೊರಡಿಸಿರುವ ಸೂಚನೆಗಳ ಅನ್ವಯ ಆಚರಿಸಲಾಗುವುದು. ಇದಕ್ಕಾಗಿ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಿ, ಶಿಷ್ಟಾಚಾರದಂತೆ ಸ್ವಾತಂತ್ರ್ಯ ದಿನಾಚರಣೆಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಕೋವಿಡ್-19 ನಿರ್ವಹಣೆಯ ಸಂಬಂಧ ಜಿಲ್ಲೆಯಲ್ಲಿ ರಾಷ್ಟ್ರೀಯ ನಿರ್ದೇಶನಗಳು ಜಾರಿಯಲ್ಲಿರಲಿವೆ. ಕಂಟೇನ್‍ಮೆಂಟ್ ವಲಯಗಳಲ್ಲಿನ ಲಾಕ್‍ಡೌನ್ ಆ. 31ರವರೆಗೆ ಮುಂದುವರೆಯಲಿವೆ ಎಂದು ಮಾಹಿತಿ ನೀಡಿದರು.
ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ: ರಾಜ್ಯದಲ್ಲಿ ಕೋವಿಡ್-19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ. ಹಬ್ಬದಂದು ಸಾಮೂಹಿಕ ಪ್ರಾರ್ಥನೆ ಮಾಡಲು ಇಚ್ಚಿಸಿದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯು ಜೂ. 6ರಂದು ಹೊರಡಿಸಿರುವ ಸುತ್ತೋಲೆ ಹಾಗೂ ಜು. 24ರ ಸರ್ಕಾರದ ಆದೇಶದಂತೆ ಮಸೀದಿಗಳ ಆಡಳಿತ ಮಂಡಳಿಗಳು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಆಯಾ ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಅವಕಾಶ ನೀಡಲಾಗಿದೆ. ಒಂದು ವೇಳೆ ಹೆಚ್ಚಿನ ಜನರು ಆಗಮಿಸಿದ್ದಲ್ಲಿ ಎರಡು ಅಥವಾ ಮೂರು ಬ್ಯಾಚ್‍ಗಳಲ್ಲಿ ಆಯಾ ಮಸೀದಿಗಳಲ್ಲಿಯೇ ನಮಾಜ್ ನಿರ್ವಹಿಸಲು ಅವಕಾಶವಿರುತ್ತದೆ. ಮಸೀದಿಗಳನ್ನು ಹೊರತುಪಡಿಸಿ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ ಎಂದು ತಿಳಿಸಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಒಂಟೆ, ಗೋವು ಸೇರಿದಂತೆ ಇತರ ಪ್ರಾಣಿಗಳ ಸಾಗಣೆ ಮತ್ತು ಕಾನೂನು ಬಾಹಿರವಾಗಿ ವಧೆ ಮಾಡುವುದನ್ನು ನಿಷೇಧಿಸಿದ್ದು, ಪ್ರಾಣಿಗಳ ಅಕ್ರಮ ಸಾಗಣೆ ತಡೆಗೆ ಅಧಿಕಾರಿಗಳ ತಂಡ ರಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಐಎಎಸ್ ಪ್ರೊಬೇಷನರಿ ಅಧಿಕಾರಿ ಅಶ್ವಿಜಾ ಬಿ.ವಿ, ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.