ಸುರಪುರ (ಯಾದಗಿರಿ) : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ. ಸುರಪುರ ತಾಲೂಕು ಘಟಕದಿಂದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿತು.
ದಲಿತ ವಿರೋಧಿ ಭೂಸುಧಾರಣ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು, ದೌರ್ಜನ್ಯ ತಡೆ ಕಾಯ್ದೆ ಬಲಗೊಳಿಸಬೇಕು, ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣ ಪರಿಹಾರ ಒದಗಿಸಬೇಕು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಾಲಯದ ಸ್ಥಾಪನೆಯಾಗಬೇಕು, ಜನಸಂಖ್ಯೆಯ ಪ್ರಮಾಣಕ್ಕನುಸಾರವಾಗಿ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು, ನ್ಯಾ. ನಾಗಮೋಹನದಾಸ್ ಮತ್ತು ನ್ಯಾ. ಸದಾಶಿವ ಆಯೋಗದ ವರದಿ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ಮತ್ತು ಒಳ ಮೀಸಲಾತಿಯಲ್ಲಾಗಿರುವ ಅನ್ಯಾಯ ಸರಿಪಡಿಸಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಅಂಬೇಡ್ಕರ್ ಇಂದಿರಾ ಆವಾಸ್ ಯೋಜನೆಯಲ್ಲಿ ಗ್ರಾಮೀಣ ಭಾಗದ ದಲಿತರಿಗೆ ಹಿತ್ತಲ ಮನೆಗಾಗಿ 4 ಗುಂಟೆ ಭೂಮಿ ನೀಡಬೇಕು.
ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನವನ್ನು ಹೆಚ್ಚಿಸಿ ಕುಟುಂಬದ ಗಣತಿ ಮಾಡಿ ಪುನರ್ವಸತಿ ಕಲ್ಪಿಸಿ ದೇವದಾಸಿ ಮಕ್ಕಳಿಗೆ ಉದ್ಯೋಗ ಒದಗಿಸಿ, ಸ್ಮಶಾನ ಕಾರ್ಮಿಕರ ವೇತನ ರಹಿತ ಕೆಲಸ ತಡೆಯುವಂತೆ ಆಗ್ರಹಿಸಿದರು.
ನಂತರ ತಹಶೀಲ್ದಾರ್ ನಿಂಗಣ್ಣ ಬಿರಾದರ್ ಅವರ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ಪ್ರಕಾಶ್ ಆಲ್ಹಾಳ, ಉಪಾಧ್ಯಕ್ಷ ಬಸವರಾಜ ಹೊಸಮನಿ ಇತರರು ಹಾಜರಿದ್ದರು.