ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೊರನಹಳ್ಳಿ ಗ್ರಾಮದಲ್ಲಿ ಸೀಮಂತ ಕಾರ್ಯಕ್ರಮದ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳು ಮರಣ ಹೊಂದಿದ್ದಾರೆ. ಆದ್ಯ (3 ವರ್ಷ), ಮಹಾಂತೇಶ(1.5ವರ್ಷ), ನಿಂಗಮ್ಮ (90 ವರ್ಷ) ಎಂಬುವವರು ಸಾವನ್ನಪ್ಪಿದ್ದು, ಇನ್ನುಳಿದ 15 ಜನರು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್ನಲ್ಲಿ ಈ ದುರ್ಘಟನೆ ಜರುಗಿದೆ. ದುರ್ಘಟನೆಯಲ್ಲಿ ದೋರನಹಳ್ಳಿ ಗ್ರಾಮದ ಜ್ಯೋತಿ ಬಾಬುರಾವ್ (45), ಸುರೇಖಾ (6), ಮಹಾಂತೇಶ್ (35), ನಾಗಣ್ಣ (55), ಕಲ್ಲಪ್ಪ (50), ಸಂಗನಗೌಡ (50), ಗುರುಲಿಂಗಪ್ಪ (35), ಶಾರದಾ ಮಲ್ಲಣ್ಣ (58), ಚನ್ನಪ್ಪ (50), ಈರಪ್ಪ (18), ಸುಮಂಗಲ (45), ಗುರುಶಾಂತಗೌಡ (45), ಶಾಂತಗೌಡ (40), ಶಹಪೂರ ನಗರದ ಹಳೆಪೇಟೆ ನಿವಾಸಿ ಚನ್ನವೀರ ( 40), ತಾಲೂಕಿನ ಸಗರ ಗ್ರಾಮದ ಭೀಮರಾಯ (55) ಬಸವರಾಜ (18), ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಈರಣ್ಣ (50) ಸೇರಿದಂತೆ 15 ಜನರು ಗಾಯಗೊಂಡಿದ್ದಾರೆ.
ಈ ಪೈಕಿ 10 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ಯುಕೆಪಿ ಕ್ಯಾಂಪ್ನ ನಿವೃತ್ತ ನೌಕರ ಸಾಹೇಬಗೌಡ ಅವರ ಮನೆ ಮುಂಭಾಗದಲ್ಲಿ ಘಟನೆ ಜರುಗಿದೆ. ಸಾಹೇಬ ಗೌಡ ಅವರ ಸೊಸೆಯ ಸೀಮಂತ ಕಾರ್ಯಕ್ರಮ ನಡೆಸಲಾಗುತಿತ್ತು. ಈ ವೇಳೆ, ಅಡುಗೆ ಮಾಡಲು ತಂದಿಟ್ಟಿದ್ದ ಸಿಲಿಂಡರ್ ಸೋರಿಕೆಯಾಗಿ ಬ್ಲಾಸ್ಟ್ ಆಗಿದೆ. ಸಿಲಿಂಡರ್ ಬ್ಲಾಸ್ಟ್ ನಿಂದ ಟೆಂಟ್, ಬೈಕ್ ಹಾಗೂ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿತ್ತು.
ಘಟನೆ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸಿಲಿಂಡರ್ ಪೂರೈಕೆ ಮಾಡಿದ ಎಜೆನ್ಸಿ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಈ ಘಟನೆ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬೆಂಕಿ ಹಚ್ಚಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ