ಕುಷ್ಟಗಿ: ಆರೋಗ್ಯ ಸಿಬ್ಬಂದಿ ಲಸಿಕೆ ಹಾಕಲು ಮುಂದಾದಾಗ ವ್ಯಕ್ತಿಯೋರ್ವ ತನ್ನ ಮೈಯಲ್ಲಿ ದೇವರು ಬಂದಂತೆ ನಟಿಸಿ, ಸಿಬ್ಬಂದಿಯನ್ನು ಯಾಮಾರಿಸಿದ ಘಟನೆ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಜರುಗಿದೆ.
ಕೋವಿಡ್ ಲಸಿಕೆ ಮೈಮೇಲೆ ದೇವರು : ಕೆ.ಬೋದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ನಾಗರಾಜ ವಡ್ಡರ, ಮಹಿಳಾ ಪೇದೆ ಮುತ್ತಮ್ಮ ಸೇರಿದಂತೆ ಆಶಾ ಕಾರ್ಯರ್ತೆಯರು ಕೋವಿಡ್ ಲಸಿಕೆ ಹಾಕಲು ಶಾಖಾಪುರ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಗ್ರಾಮದ ನಿವಾಸಿ ರಾಮಣ್ಣ ಯಲಬುರ್ತಿ ಮನೆಗೆ ಹೋಗಿದ್ದರು. ಆರೋಗ್ಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆ ಮನೆಯ ಜಗಲಿ ಮೇಲಿದ್ದ ಗಂಟೆಗಳನ್ನು ಹಿಡಿದು ಮೈಮೇಲೆ ದೇವರು ಬಂದಂತೆ, ಕುದುರೆ.. ಕುದುರೆ... ಎನ್ನುತ್ತಲೇ ಕುದುರೆಯಂತೆಯೇ ಓಡಾಡಿದ ವಿಲಕ್ಷಣ ಪ್ರಸಂಗವನ್ನು ನೋಡಿ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದರು.
ಆದಾಗ್ಯೂ ರಾಮಣ್ಣನ ಮನವೊಲಿಸಿ ಲಸಿಕೆ ಹಾಕಲು ಕುಟುಂಬದವರೊಟ್ಟಿಗೆ ಪ್ರಯತ್ನಿಸಿದರು ಪ್ರಯೋಜನ ಆಗಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ರಾಮಣ್ಣ ಯಲಬುರ್ತಿಗೆ ಲಸಿಕೆ ಹಾಕದೇ ವಾಪಸಾದರು.
ಈ ಕುರಿತು ಸಮುದಾಯ ಆರೋಗ್ಯ ಅಧಿಕಾರಿ ನಾಗರಾಜ ವಡ್ಡರ ಪ್ರತಿಕ್ರಿಯಿಸಿ, ಶಾಖಾಪೂರ ಗ್ರಾಮದ ರಾಮಣ್ಣ ಯಲಬುರ್ತಿ ಅವರು ಕೋವಿಡ್ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಹೋದಾಗ, ತನಗೆ ಹೃದಯ ಕಾಯಿಲೆ ಇದ್ದು ಲಸಿಕೆ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ. ಆದರೂ ಹೃದಯ ಕಾಯಿಲೆ ಇದ್ದರೂ ಏನೂ ಆಗಲ್ಲವೆಂದು ವ್ಯಾಕ್ಸಿನ್ ಹಾಕಲು ಯತ್ನಿಸಿದೆವು. ಆದರೆ ಆ ವ್ಯಕ್ತಿ ಮೈಮೇಲೆ ದೇವರು ಬಂದಂತೆ ಕುಣಿದು ವಿಚಿತ್ರವಾಗಿ ವರ್ತಿಸಿದ. ಅದಕ್ಕಾಗಿ ನಾವು ಲಸಿಕೆ ಹಾಕಲಿಲ್ಲ ಎಂದು ತಿಳಿಸಿದರು.