ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕ ದಳದ ವತಿಯಿಂದ ಕೊರೊನಾ ಜಾಗೃತಿ ಅಭಿಯಾನವನ್ನು ನಡೆಸಲಾಯಿತು.
ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೊರೊನಾ ಮಹಾಮಾರಿಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ವೇಳೆ ಗೃಹರಕ್ಷಕದಳದ ಕಂಪನಿ ಕಮಾಂಡರ್ ಎಲ್ಲಪ್ಪ ಹುಲಿಕಲ್ ಮಾತನಾಡಿ, ಇಂದು ಕೊರೊನಾ ಎನ್ನುವುದು ಜಗತ್ತಿಗೆ ಮಹಾಮಾರಿಯಾಗಿ ಪರಿಣಮಿಸಿದೆ. ಆದ್ದರಿಂದ, ಪ್ರತಿಯೊಬ್ಬರೂ ಕೂಡ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಕೆಂಭಾವಿ ಠಾಣೆಯ ಪಿಎಸ್ಐ ಸುದರ್ಶನ್ ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಮನೆಯಿಂದ ಬರಬೇಕು. ಒಂದು ವೇಳೆ ಅಜಾಗರೂಕರಾಗಿ ಹೊರ ಬಂದವರಿಗೆ ಪೊಲೀಸರು ದಂಡ ವಿಧಿಸಲಿದ್ದಾರೆ. ಕೇವಲ ಮಾಸ್ಕ್ ಮಾತ್ರವಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ ಸಾಮಾಜಿಕ ಅಂತರವನ್ನು ಕಾಪಾಡಬೇಕು ಹಾಗೂ ಆಗಾಗ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು ಎಂದು ಸಲಹೆ ನೀಡಿದರು.