ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೋತಪೇಟೆ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮತ್ತೋರ್ವ ಮಹಿಳೆ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಸಿದ್ಧಮ್ಮ ಹಿರೇಮಠ್ (62) ಎಂದು ಗುರುತಿಸಲಾಗಿದೆ. ಈ ಮೂಲಕ ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಅಸ್ವಸ್ಥಗೊಂಡಿರುವ ಮಕ್ಕಳು ಸೇರಿ 38 ಜನರಿಗೆ ತಾಲೂಕು ಆಸ್ಪತ್ರೆ ಮತ್ತು ವಿವಿಧೆಡೆ ಚಿಕಿತ್ಸೆ ನೀಡಲಾಗುತ್ತಿದೆ.
ಕಲುಷಿತ ನೀರು ಸೇವನೆಯಿಂದ ಇದೇ ಅ.22ರಂದು ಹೊನ್ನಪ್ಪಗೌಡ (42) ಹಾಗೂ ಅ.24ರಂದು ಈರಮ್ಮ (80) ಎಂಬವರು ಮೃತಪಟ್ಟಿದ್ದರು. ಗ್ರಾಮದಲ್ಲಿರುವ ತೆರೆದ ಬಾವಿಯ ಮೂಲಕ ಅಲ್ಲಿನ ಟ್ಯಾಂಕರ್‌ಗೆ ನೀರು ಪೂರೈಕೆಯಾಗಿದ್ದು, ಟ್ಯಾಂಕರ್ ನೀರು ನಲ್ಲಿಗಳ ಮೂಲಕ ಮನೆ ಮನೆಗಳಿಗೆ ಸರಬರಾಜು ಮಾಡಿದ ಕಾರಣ ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದೆ.
ಈ ಬಗ್ಗೆ ಸ್ವಚ್ಛತಾ ಕಾರ್ಯ ಸೇರಿದಂತೆ ಜನರ ಆರೋಗ್ಯ ತಪಾಸಣೆಗಾಗಿ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯ, ಹೋತಪೇಟೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಸ್ವಸ್ಥಗೊಂಡಿದ್ದ 200ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ.
ಇಲ್ಲಿಯವರೆಗೆ ಹೋತಪೇಟೆ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಒಟ್ಟು 38 ವಾಂತಿಭೇದಿ ಪ್ರಕರಣಗಳು ದಾಖಲಾಗಿವೆ. ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಮನೆಗೆ ತೆರಳಿ ಆರೋಗ್ಯದ ವರದಿ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಶಹಾಪುರದಲ್ಲಿ ಕಲುಷಿತ ನೀರು ಕುಡಿದು ವೃದ್ಧೆ ಸಾವು.. 40 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ