ಸುರಪುರ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಹುಣಸಗಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡ ನಾಗಣ್ಣ ಸಾಹು ದಂಡಿನ್ ಮಾತನಾಡಿ, ದೇಶದ ಜನರು ಕೊರೊನಾ ಹಾವಳಿಯಿಂದ ನಲುಗಿದ್ದಾರೆ. ಇದರ ಬಗ್ಗೆ ಪರಿವೇ ಇಲ್ಲದಂತಿರುವ ಕೇಂದ್ರ ಸರ್ಕಾರ ದಿನ ನಿತ್ಯವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿದೆ. ಈ ಮೂಲಕ ಜನರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಎಂದು ದೂರಿದರು.
ಕಳೆದ 6 ತಿಂಗಳಿಂದ ಪೆಟ್ರೋಲ್ ಲೀಟರ್‌ಗೆ ರೂ 23.78 ಹಾಗೂ ಡೀಸೆಲ್‌ಗೆ 28.37 ರೂ ಏರಿಕೆ ಮಾಡಲಾಗಿದೆ. ಇದರಿಂದ ಪೆಟ್ರೋಲ್ ಬೆಲೆ ಶೇ 258% ಹಾಗೂ ಡೀಸೆಲ್ ಶೇ 820% ನಷ್ಟು ಏರಿಕೆ ಕಂಡಿದೆ. ಬೆಲೆ ಏರಿಕೆಯಿಂದ ಜನರು ನಲುಗಿ ಹೋಗಿದ್ದಾರೆ. ಇಂತಹ ಆಡಳಿತ ನೀಡಿ ನಾವು ದೇಶ ಉದ್ಧಾರ ಮಾಡಿದ್ದೇವೆ ಎಂದು ದಿನ ಬೆಳಗಾದರೆ ಹೇಳಿಕೊಂಡು ತಿರುಗುವುದು ಹಾಸ್ಯಾಸ್ಪದ ಎಂದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ವಿನಯ್ ಕುಮಾರ್ ಪಾಟೀಲ್ ಮೂಲಕ ಸಲ್ಲಿಸಿದರು.