ಗುರುಮಠಕಲ್(ಯಾದಗಿರಿ): ನಿಮಗೆ ಏನಾದರು ಕಷ್ಟ ಬಂದರೆ ನಮ್ಮ ಹತ್ತಿರ ಬಾ. ನಾನು ಸಹಾಯ ಮಾಡುತ್ತೇನೆ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮಕ್ಕೆ ಭೇಟಿ ನೀಡಿ ಸಿಡಿಲು ಬಡಿದು ಮೃತಪಟ್ಟ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ.
ಸೆ. 28 ರಂದು ಸಿಡಿಲು ಬಡಿದು ಎಸ್.ಹೊಸಳ್ಳಿ ಗ್ರಾಮದ ಹೊರಭಾಗದಲ್ಲಿ ತಾಯಿ ಮೋನಮ್ಮ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಈ ಹಿನ್ನೆಲೆ ಮೃತ ಮೋನಮ್ಮಳ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬದ ಸದಸ್ಯರಿಗೆ 15 ಲಕ್ಷ ರೂ. ಪರಿಹಾರದ ಚೆಕ್ಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಸರ್ಕಾರ ನೀಡಿದ ಪರಿಹಾರದ ಹಣವನ್ನು ಬ್ಯಾಂಕ್ನಲ್ಲಿ ಜಮಾ ಮಾಡಿ ಅದರಲ್ಲಿ ಬಂದ ಬಡ್ಡಿ ಹಣದಲ್ಲಿ ಜೀವನ ನಡೆಸಿ ಎಂದು ಕುಟುಂಬಸ್ಥರಿಗೆ ಕಿವಿಮಾತು ಹೇಳಿದರು.
ಬಳಿಕ ಸಿಡಿಲು ಬಡಿದು ಮೃತಪಟ್ಟ ಎಸ್.ಹೊಸಳ್ಳಿ ಗ್ರಾಮದ ರೈತ ಸಾಬಣ್ಣ ಮನೆಗೆ ಭೇಟಿ ನೀಡಿ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು. ನಂತರ ಮಾತನಾಡಿದ ಶಾಸಕರು ಮಳೆ ಬರುವಾಗ ಎಚ್ಚರಿಕೆ ವಹಿಸಬೇಕು. ಸಿಡಿಲು, ಮಿಂಚಿನ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಯಾದಗಿರಿ: ಸಿಡಿಲು ಬಡಿದು ತಾಯಿ ಮಕ್ಕಳಿಬ್ಬರು ಸೇರಿ ನಾಲ್ವರು ಸಾವು