ಗುರುಮಠಕಲ್: ಪಟ್ಟಣದ ಕೃಷಿ ಮಾರುಕಟ್ಟೆಯ ವರ್ತಕರು ರೈತರು ಬೆಳೆದ ಉತ್ಪನ್ನಗಳನ್ನು ಖರೀದಿಸುವ ವೇಳೆ ಮೋಸ ಮಾಡುತ್ತಿದ್ದು, ಅಧಿಕೃತ ಬಿಲ್ ನೀಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಹಿತ ಸಮಿತಿಯಿಂದ ತಾಲೂಕು ದಂಡಾಧಿಕಾರಿ ಸಂಗಮೇಶ ಜಿಡಿಗೆ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿ 100 ರೂಪಾಯಿಗೆ 3 ರೂ. ರಂತೆ ಕಮೀಷನ್ ಹಾಗೂ ಅಧಿಕೃತ ಬಿಲ್ ನೀಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದರೂ, ಕೃಷಿ ಇಲಾಖೆಯ ಅಧಿಕಾರಿಗಳೂ ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಲದಿನಗಳ ಹಿಂದೆ ರೈತರಿಗೆ ಆಗುತ್ತಿರುವ ಅನ್ಯಾಯದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಸುದ್ದಿಯಿಂದ ಎಚ್ಚೆತ್ತ ಕೃಷಿ ಅಧಿಕಾರಿಗಳು ಕೃಷಿ ಮಾರುಕಟ್ಟೆಗೆ ಭೇಟಿ ನೀಡಿ ಕೇವಲ ಮಾರುಕಟ್ಟೆಯ ಅಂಗಡಿಯ ವರ್ತಕರನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ. ಈ ವೇಳೆ, ಸಮಸ್ಯೆ ಬಗ್ಗೆ ರೈತರನ್ನು ಮಾತನಾಡಿಸದೇ ಹಾಗೆಯೇ ಹೊರಟು ಹೋಗಿದ್ದಾರೆ ಎಂದು ರೈತ ಮುಖಂಡ ರವೀಂದ್ರ ರೆಡ್ಡಿ ಪೋತುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಪೆಟ್ರೋಲ್, ಡೀಸೆಲ್, ಮದ್ಯದ ಮೇಲೆ ಸೆಸ್: ಗ್ರಾಹಕರಿಗಿಲ್ಲ ಯಾವುದೇ ರೀತಿಯ ಬೆಲೆ ಏರಿಕೆ ಬರೆ!
ಕೃಷಿ ಮಾರುಕಟ್ಟೆಯಲ್ಲಿ ರೈತರಿಗೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.