ಸುರಪುರ: ನಿರ್ಗತಿಕ ವೃದ್ಧೆಯ ಮನೆ ದುರಸ್ತಿ ಮಾಡಿಕೊಟ್ಟು ದೇವಾಪುರದ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ವಿಶೇಷವಾಗಿ ಬಸವ ಜಯಂತಿ ಆಚರಿಸಲಾಯಿತು.
ನಗರದ ಪಾಳದಕೇರಾದಲ್ಲಿ ಕಳೆದ ಐದು ವರ್ಷಗಳಿಂದ ನಾಲ್ಕು ಫೀಟ್ ಸುತ್ತಳತೆಯ ಗುಡಿಸಲಲ್ಲಿ ವಾಸವಾಗಿದ್ದ ಗುರುಬಾಯಿ ಎಂಬ ನಿರ್ಗತಿಕ ಮಹಿಳೆಯ ಕರುಣಾಜನಕ ಬದುಕಿನ ಸಂಗತಿ ತಿಳಿದು ವೃದ್ಧೆಯ ಮನೆ ದುರಸ್ತಿಗೊಳಿಸಿಕೊಡಲು ಮುಂದಾಗಿದ್ದ ತಾಲೂಕಿನ ದೇವಾಪುರದ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಜುಗೌಡ ಸೇವಾ ಸಮಿತಿಯ ನೇತೃತ್ವದಲ್ಲಿ ಮನೆ ದುರಸ್ತಿಗೊಳಿಸಿ ಇಂದು ಗೃಹ ಪ್ರವೇಶದ ಮೂಲಕ ಬಸವ ಜಯಂತಿ ಆಚರಿಸಿದರು.
ಈ ವೃದ್ಧ ಮಹಿಳೆಯ ಕರುಣಾಜನಕ ಸ್ಥಿತಿಯನ್ನು ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಈ ವರದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳೂ ಸ್ಪಂದಿಸಿ ವೃದ್ಧ ಮಹಿಳೆಗೆ ಆಧಾರ್ ಕಾರ್ಡ್, ವೃದ್ಧಾಪ್ಯ ವೇತನ ಹಾಗೂ ರೇಷನ್ ಕಾರ್ಡ್ ಕೊಡಿಸಲು ನೆರವಾಗಿದ್ದಾರೆ. ಇನ್ನು ಶ್ರೀಗಳು ಮತ್ತು ಪೊಲೀಸ್ ಅಧಿಕಾರಿಗಳ ಸ್ಪಂದನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಇಂದು ನಡೆದ ಗೃಹ ಪ್ರವೇಶದೊಂದಿಗಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸಾಹೇಬಗೌಡ ಎಂ.ಪಾಟೀಲ್, ಕೆಂಭಾವಿ ಠಾಣೆಯ ಪಿಎಸ್ಐ ಸುದರ್ಶನ್ ರಡ್ಡಿ ಹಾಗೂ ಟೀಂ ರಾಜುಗೌಡ ಸೇವಾ ಸಮಿತಿಯ ಕಾರ್ಯಕರ್ತರು ಸೇರಿದಂತೆ ಇತರರಿದ್ದರು.