ಯಾದಗಿರಿ: ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳು ಅಡ್ಡೆಗಳ ಮೇಲೆ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಖುಷಕೇಶ್ ಭಗವಾನ ನೇತೃತ್ವದಲ್ಲಿ ದಾಳಿ ನಡೆಸಿ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮರಳು ಜಪ್ತಿ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಸುರಪುರ ತಾಲೂಕಿನ ಹೆಮ್ಮಡಗಿ, ಚೌಡೇಶ್ವರಾಳ, ಅಡ್ಡೊಡಗಿ ಸೇರಿದಂತೆ ಇತರ ಗ್ರಾಮಗಳ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳು ಅಡ್ಡೆಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸುಮಾರು 1 ಕೋಟಿ ರೂ. ಮೌಲ್ಯದ 325 ಟಿಪ್ಪರ್ನಷ್ಟು ಅಕ್ರಮ ಮರಳು ಜಪ್ತಿ ಮಾಡಲಾಗಿದೆ ಎಂದು ಯಾದಗಿರಿ ಎಸ್.ಪಿ ಖುಷಕೇಶ್ ಭಗವಾನ ಸೋನಾವಣೆ ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಸಿಪಿಐಗಳಾದ ಸದಾಶಿವ ಎಸ್, ದೌಲತ್ ಎನ್.ಕೆ, ಎಸ್.ಎಮ್ ಪಾಟೀಲ್ ಸೇರಿದಂತೆ ಸಿಬ್ಬಂದಿ ಶಶಿಕುಮಾರ್ ರಾಠೋಡ, ಮಲ್ಲಿಕಾರ್ಜುನ ಪೂಜಾರ್, ಯುವರಾಜ ಪಾಲ್ಗೊಂಡಿದ್ದರು. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.