ಸುರಪುರ: ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ನಡೆದ ಶಾಸಕರ ಮನೆಯ ಮೇಲಿನ ದಾಳಿ ಹಾಗೂ ಪೊಲೀಸ್ ಠಾಣೆಯ ಮೇಲಿನ ದಾಳಿಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮುಖಂಡರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಕುರಿತು ಕಲಬುರ್ಗಿ ವಿಭಾಗಿಯ ಸಹ ಪ್ರಮುಖ ಉಪೇಂದ್ರ ನಾಯಕ್ ಸುಬೇದಾರ್ ಮಾತನಾಡಿ, ಬೆಂಗಳೂರಿನ ಕೆಜಿಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಶಾಸಕರ ಮನೆಯ ಮೇಲಿನ ದಾಳಿ ಹಾಗೂ ಪೊಲೀಸ್ ಠಾಣೆಯ ಮೇಲಿನ ದಾಳಿ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೃತ್ಯವನ್ನು ಎಬಿವಿಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.
ಈ ಘಟನೆಗೆ ಕಾರಣರಾಗಿರುವ ಯಾರೇ ಆಗಿರಲಿ ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ದೇಶದಲ್ಲಿ ಅನೇಕ ಜಾತಿ ಮತ ಪಂಥ ಧರ್ಮಗಳ ಜನರು ಸಹೋದರತೆ ಸಾಮರಸ್ಯದಿಂದ ಬದುಕುತ್ತಿದ್ದು, ಇಂತಹ ದೇಶದಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸುವಂತ ಗೂಂಡಾ ಪ್ರವೃತ್ತಿಯನ್ನು ಹೊಂದಿರುವ ಯಾರೇ ಆಗಲಿ ಅಂಥವರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಎಬಿವಿಪಿ ಆಗ್ರಹಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣದ ಕುರಿತು ಮಾತನಾಡಿ, ಸರ್ಕಾರಗಳು ಈಗ ಆನ್ಲೈನ್ ಶಿಕ್ಷಣದ ಮೂಲಕ ಮಕ್ಕಳಿಗೆ ಪಾಠ ಆರಂಭಿಸಿರುವುದು ಸರಿಯಾದ ಕ್ರಮವಲ್ಲ. ಆನ್ಲೈನ್ ಮೂಲಕ ಪಾಠ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಏನಾದರೂ ಪಾಠದಲ್ಲಿನ ಸಮಸ್ಯೆ ಕಂಡುಬಂದರೆ ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗದು. ಇಂತಹ ಹಲವು ಸಮಸ್ಯೆಗಳು ಎದುರಾಗುವುದರಿಂದ ಆನ್ಲೈನ್ ಶಿಕ್ಷಣವನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತೇವೆ ಎಂದರು.
ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸರ್ಕಾರ ಕೋವಿಡ್-19 ಪರಿಹಾರ ಧನವನ್ನು ನೀಡಬೇಕು. ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಸಹ ಕೋವಿಡ್-19 ಪರಿಹಾರಧನವನ್ನು ನೀಡಬೇಕೆಂದು ಆಗ್ರಹಿಸಿದರು.