ಯಾದಗಿರಿ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ರಾಜೂಗೌಡ ಅವರು ನೀಡಿದ ಹೆಸರು ದುರ್ಬಳಕೆ ದೂರಿನನ್ವಯ ಸಕಲೇಶಪುರ ಮೂಲದ ರೇಖಾ ಎಂ.ಎನ್. ಅವರನ್ನು ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಪೊಲೀಸರ ತಂಡ ಬಂಧಿಸಿ ಸುರಪುರ ಪೊಲೀಸ್ ಠಾಣೆಗೆ ಕರೆ ತರಲಾಯಿತು.
ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್.ಪಿ. ಡಾ. ಸಿ.ಬಿ. ವೇದಮೂರ್ತಿ, ಕೆಲ ದಿನಗಳಿಂದ ಮಾಧ್ಯಮವೊಂದರಲ್ಲಿ ಶಾಸಕ ರಾಜೂಗೌಡ ಹೆಸರೇಳಿ ರೇಖಾ ಎಂಬುವರು ನೌಕರಿ ಕೊಡಿಸುವುದಾಗಿ ಹೇಳಿದ ಆಡಿಯೋ ಪ್ರಸಾರವಾಗಿತ್ತು. ಆರೋಪಿ ಮಹಿಳೆಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಶಾಸಕ ರಾಜೂಗೌಡ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಮೂರು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದರು.
ನೌಕರಿ ಕೊಡಿಸುವುದಾಗಿ ಮೋಸ: ಸಕಲೇಶಪುರ ಮೂಲದ ರೇಖಾ ಎಂಬವರು ಬೆಂಗಳೂರಿನ ಕೆ.ಆರ್.ಪುರಂನಲ್ಲಿ ವಾಸವಿದ್ದು, ರಿಯಲ್ ಎಸ್ಟೇಟ್ ಮಾಡುತ್ತಿದ್ದರು. ಈ ಮಹಿಳೆಗೆ ಈರಪ್ಪಗೌಡ ಎಂಬುವವನು ಮಧ್ಯವರ್ತಿಯಾಗಿದ್ದು, ಕೆ.ಆರ್.ಪುರಂನಲ್ಲಿ ಬೇಕರಿ ಇಟ್ಟುಕೊಂಡಿದ್ದಾನೆ. ಎನ್‌ಜಿಒ ಟ್ರಸ್ಟ್ ಮೂಲಕ ಬ್ಯಾಂಕ್ ಆರಂಭಿಸಿ ಬ್ಯಾಂಕಿನಲ್ಲಿ ನೌಕರಿ ಕೊಡಿಸುವುದಾಗಿ ಅಮಾಯಕರಿಂದ ಲಕ್ಷಾಂತರ ರೂ. ಪೀಕಿದ್ದಾರೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಹಲವರಿಗೆ ಮೋಸ ಮಾಡಿರುವ ಶಂಕೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಶಾಸಕರ ಹೆಸರು ಬಳಕೆ: ನೌಕರಿ ಕೊಡಿಸುವುದಾಗಿ ಈರಪ್ಪಗೌಡ ಮೂಲಕ ಸಾರ್ವಜನಿಕರನ್ನು ಭೇಟಿ ಮಾಡಿಸಿ 10-12 ಜನರಿಂದ ಹಣ ಪಡೆದಿದ್ದಾರೆ. ರಾಯಚೂರು ಮತ್ತು ಯಾದಗಿರಿ ಜನರಿಗೆ ನಂಬಿಸುವುದಕ್ಕಾಗಿ ಶಾಸಕ ರಾಜೂಗೌಡ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು, ಅವರು ನಮಗೆ ಪರಿಚಯವಿಲ್ಲ. ಒಮ್ಮೆಯೂ ನೋಡಿಯೂ ಇಲ್ಲ. ಶಾಸಕರ ಹೆಸರು ಬಳಸಿದ್ದು, ತಪ್ಪಾಗಿದೆ. ಇದರಲ್ಲಿ ನಮಗೂ ಹಾಗೂ ಶಾಸಕರಿಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ವಿಚಾರಣೆಯಲ್ಲಿ ಹೇಳಿದ್ದಾಗಿ ತಿಳಿಸಿದರು.
ಲಕ್ಷಾಂತರ ರೂ. ಪೀಕಿದ ಆರೋಪಿ: ಸುರಪುರ ತಾಲೂಕಿನ ಸೂಗೂರು ಗ್ರಾಮದ ಈರಪ್ಪಗೌಡ ಮತ್ತು ರೇಖಾ ಇಬ್ಬರು ಸೇರಿಕೊಂಡು ಜನರಿಗೆ ವಂಚಿಸುತ್ತಿದ್ದರು ಎನ್ನುವ ವಿಷಯವು ಪ್ರಾಥಮಿಕ ಹಂತದಲ್ಲಿ ಬೆಳಕಿಗೆ ಬಂದಿದೆ. ಕೋನಾಳ ಗ್ರಾಮದ ಈರಪ್ಪ ರಸ್ತಾಪುರ ಎನ್ನುವವರ ಬಳಿಯಲ್ಲಿ ಅವರ ಮಕ್ಕಳಿಗೆ ನೌಕರಿ ಕೂಡಿಸುವುದಾಗಿ ಸುಮಾರು ಐದು ಲಕ್ಷ ರೂ., ಸೂಗೂರು ಗ್ರಾಮದ ಮಲ್ಲನಗೌಡ ಕಮತಗಿ ಅವರ ಬಳಿಯಲ್ಲಿ 3.65 ಲಕ್ಷ ರೂ., ಹಾಗೂ ಸಗರ ಗ್ರಾಮದ ವಿಶ್ವನಾಥ ರೆಡ್ಡಿ ಇವರು ಸುಮಾರು 15 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಇದಕ್ಕೆ ಮಧ್ಯವತಿರ್ಯಾಗಿ ಸುರಪುರ ತಾಲೂಕಿನ ಸೂಗೂರ ಗ್ರಾಮದ ಈರಪ್ಪಗೌಡ ಎನ್ನುವ ವ್ಯಕ್ತಿ ಜನರನ್ನು ಸಂಪರ್ಕಿಸಿ ವಂಚಿಸುತ್ತಿದ್ದರು ಎಂದರು.
ಸುರಪುರ ಪಿಐ ಸುನೀಲ್ ಮೂಲಿಮನಿ ಹಾಗೂ ಸೈಬರ್ ಕ್ರೈಂ ಪಿಐ ಬಾಪುಗೌಡ ಪಾಟೀಲ್ ನೇತೃತ್ವದ ತಂಡ ಆರೋಪಿ ರೇಖಾಳನ್ನು ಬಂಧಿಸಲಾಗಿದೆ. ಸಿಬ್ಬಂದಿಗಳಾದ ಬಸವರಾಜ, ಶಿವಶರಣಪ್ಪ, ಸವಿತಾ, ಬನ್ನಮ್ಮ, ಲತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಾವೇರಿ: ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದ ಆರೋಪಿ ತಿಂಗಳ ಬಳಿಕ ಬಂಧನ