ಯಾದಗಿರಿ: ಡೆತ್ ನೋಟ್ ಬರೆದಿಟ್ಟು ಶಿಕ್ಷಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುರಮಠಕಲ್ ತಾಲೂಕಿನ ಎಂಪಾಡ್ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮರುಳಸಿದ್ದಪ್ಪ (35) ಆತ್ಮಹತ್ಯೆಗೆ ಶರಣಾಗಿರುವ ಶಿಕ್ಷಕ. ನಿರ್ಜನ ಎಂಪಾಡ್ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಡೇಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಮರುಳಸಿದ್ದಪ್ಪ ಕಳೆದ 13 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮರುಳಸಿದ್ದಪ್ಪ ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಯಿನಿ ಗ್ರಾಮದವರು. ಸಿದ್ದಪ್ಪರ ಸಾವಿಗೆ ಕೆಲವು ಗ್ರಾಮಸ್ಥರು ನೀಡುತ್ತಿದ್ದ ಕಿರುಕುಳವೇ ಕಾರಣ ಎನ್ನುವ ಆರೋಪಗಳು ಕೇಳಿ ಬಂದಿವೆ. ಅಲ್ಲದೆ ಒಂದೇ ಶಾಲೆಯಲ್ಲಿ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಮರುಳಸಿದ್ದಪ್ಪ, ಬೇರೆಡೆ ವರ್ಗಾವಣೆಗಾಗಿ ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಮಾನಸಿಕವಾಗಿ ಖಿನ್ನತೆಗೆ ಒಳಪಟ್ಟಿದ್ದೇನೆ ಎಂದು ಶಿಕ್ಷಕ ಮರುಳಸಿದ್ದಪ್ಪ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗುರಮಠಕಲ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.