ಯಾದಗಿರಿ: ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಹರಿಯುವ ನೀರಿನಲ್ಲಿ ಕಾರೊಂದು ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಮುಷ್ಟೂರು ಗ್ರಾಮದ ಬಳಿಯ ಚಾರ್ ಕಮಾನ್ ಬಳಿ ನಡೆದಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜೋರು ಮಳೆಗೆ ವಾಹನಗಳು, ಸಣ್ಣಪುಟ್ಟ ವಸ್ತುಗಳು ಕೊಚ್ಚಿಹೋಗುವುದರ ಜೊತೆಗೆ ಕಾರೊಂದು ಕೊಚ್ಚಿ ಹೋಗುತ್ತಿರುವ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.
ಇಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಆಗ ಹೆಚ್ಚಿನ ಮಳೆ ಸುರಿದ ಪರಿಣಾಮ ಚಾರ್ ಕಮಾನ್ ಚೌಕ್ ಪ್ರದೇಶದಲ್ಲಿ ಹಳ್ಳದಂತಾಗಿದ್ದು, ನೀರು ಕಾರಿನೊಳಗೆ ನುಗ್ಗಿದೆ. ಇನ್ನೇನು ನೀರು ತುಂಬಿ ಕಾರು ಕೊಚ್ಚಿ ಹೋಗುತ್ತಿರುವಾಗ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಇಬ್ಬರು ಕಾರಿನಿಂದ ಇಳಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ನೀರಿನ ಪ್ರಮಾಣ ಕಡಿಮೆ ಆದ ನಂತರ ಆ ವ್ಯಕ್ತಿಗಳು ಕಾರನ್ನು ತೆಗೆದುಕೊಂಡು ಹೋಗಿದ್ದಾರೆ.