ಯಾದಗಿರಿ: ತಾಲೂಕು ಪಂಚಾಯತ್ ಅಧ್ಯಕ್ಷರ ಕಚೇರಿ ಕೊಠಡಿಯಲ್ಲಿ ಕಿಡಿಗೇಡಿಗಳು ಬಿಯರ್ ಬಾಟಲ್ ಒಡೆದು ಕಲ್ಲುಗಳನ್ನು ಬಿಸಾಡಿ ಹೋಗಿರುವ ಘಟನೆ ಯಾದಗಿರಿ ತಾಲೂಕು ಪಂಚಾಯತ್ನಲ್ಲಿ ನಡೆದಿದೆ.
ತಾಲೂಕು ಪಂಚಾಯತ್ ಅಧ್ಯಕ್ಷೆ ಭೀಮವ್ವಾ ಅಚ್ಚೋಲಾ ಅವರ ಕಚೇರಿ ಕೊಠಡಿಯಲ್ಲಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು, ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಧ್ಯಕ್ಷೆ ಭೀಮವ್ವಾ ಅಚ್ಚೋಲಾ ಮತ್ತು ಸದಸ್ಯರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಒಂದು ತಿಂಗಳ ಹಿಂದಷ್ಟೇ ಇದೇ ರೀತಿಯ ಘಟನೆ ಜರುಗಿದ್ದು, ಇದು ಎರಡನೇ ಬಾರಿ ನಡೆದ ಪ್ರಕರಣವಾಗಿದೆ.
ಈ ಘಟನೆ ಹಿನ್ನೆಲೆ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸುವುದಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ, ಭರವಸೆ ನೀಡಿದ್ದಾರೆ. ಜೊತೆಗೆ ಕಿಡಿಗೇಡಿಗಳ ಪತ್ತೆಗೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.