ಯಾದಗಿರಿ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 140 ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದ್ದು ಇವರಲ್ಲಿ 9 ಜನ ಗುಣಮುಖರಾಗುವ ಮೂಲಕ ಇಂದು ಕೋವಿಡ್-19 ವಾರ್ಡ್ನಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ ಕೂರ್ಮಾ ರಾವ್ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂತರಾಜ್ಯಗಳಿಂದ ಇಲ್ಲಿಯವರೆಗೆ 14,648 ವಲಸೆ ಕಾರ್ಮಿಕರು ಜಿಲ್ಲೆಗೆ ವಾಪಸ್ ಆಗಿದ್ದು, ಇವರನ್ನೆಲ್ಲ ಜಿಲ್ಲೆಯ ವಿವಿಧ 223 ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಇವರಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ವಲಸೆ ಕಾರ್ಮಿಕರಲ್ಲೇ ಹೆಚ್ಚು ಸೊಂಕು ಪತ್ತೆಯಾಗಿಯಾಗಿತ್ತು.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 140 ಜನರಿಗೆ ಸೋಂಕು ತಗುಲಿದ್ದು ಇವರನ್ನೆಲ್ಲಾ ಜಿಲ್ಲೆಯ ನೂತನ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೊಳಗಾದ 140 ಸೋಂಕಿತರ ಪೈಕಿ 9 ಜನ ಗುಣಮುಖರಾಗಿದ್ದು ಅವರನ್ನ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದರು.
30 ವರ್ಷದ ವ್ಯಕ್ತಿ ಪಿ 1139, 22 ವರ್ಷದ ಯುವಕ ಪಿ 1140, 34 ವರ್ಷದ ವ್ಯಕ್ತಿ ಪಿ 1141, 25 ವರ್ಷದ ಮಹಿಳೆ ಪಿ 1188, 25 ವರ್ಷದ ಯುವಕ ಪಿ 1189,20 ವರ್ಷದ ಯುವಕ ಪಿ 1190 15 ವರ್ಷದ ಯುವಕ ಪಿ 1191, 30 ವರ್ಷದ ವ್ಯಕ್ತಿ ಪಿ 1192 ಸೇರಿದಂತೆ 2 ವರ್ಷದ ಗಂಡು ಮಗು ಪಿ 1256 ಗುಣಮುಖರಾದವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಗುಣಮುಖರಾದವರ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದರಿಂದ ಇವರನ್ನೆಲ್ಲ ಬಿಡುಗಡೆ ಮಾಡಲಾಗಿದೆ. ಕೊರೊನಾ ವಿರುದ್ದ ಕೆಲಸ ಮಾಡುತ್ತಿರುವ ಜಿಲ್ಲೆಯ ವೈದ್ಯಕೀಯ ಸಿಬ್ಬಂದಿ, ಪೋಲಿಸ್ ಇಲಾಖೆ ಸೇರಿದಂತೆ ಎಲ್ಲಾ ಕೊರೊನಾ ವಾರಿಯರ್ ಗಳಿಗೆ ಜಿಲ್ಲಾಧಿಕಾರಿ ಎಂ ಕೂರ್ಮಾ ರಾವ್ ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಠಿ ಬಳಿಕ ನೂತನ ಜಿಲ್ಲಾಸ್ಪತ್ರೆಗೆ ತೆರಳಿದ ಜಿಲ್ಲಾಧಿಕಾರಿ ಎಂ ಕೂರ್ಮಾ ರಾವ್, ಪೋಲಿಸ್ ವರಿಷ್ಠಾಧಿಕಾರಿ ಖುಷಿಕೇಶ್ ಭಾಗವಾನ ಸೋನಾವಾಣೆ, ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶಿಲ್ಪಾ ಶರ್ಮಾ, ಕೊರೊನಾ ವೈರಸ್ನಿಂದ ಗುಣಮುಖರಾದ 9 ಜನರಿಗೆ ಸ್ಯಾನಿಟೈಸರ್ ಕಿಟ್ ವಿತರಿಸಿ ಶುಭಕೋರುವ ಮೂಲಕ ಬಿಡುಗಡೆಗೊಳಿಸಿದರು. ಇಂದು ಬಿಡುಗಡೆಗೊಂಡ ಎಲ್ಲರೂ 14 ದಿನಗಳವರೆಗೆ ಮನೆಯಲ್ಲೇ ಇದ್ದು, ನಂತರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.