ಯಾದಗಿರಿ: ಅನ್ಯಜಾತಿ ಯುವತಿಯೊಂದಿಗೆ ಪ್ರೀತಿ ಮಾಡುತ್ತಿದ್ದ ಎಂಬ ಕಾರಣಕ್ಕೆ ಕಳೆದ ವರ್ಷ ಜ. 21, 2021 ರಂದು ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಜ.21 2021 ರಂದು ತಾಲೂಕಿನ ದರ್ಶನಾಪುರ ಗ್ರಾಮದ ಸರಕಾರಿ ಬಾಲಕರ ವಸತಿ ನಿಲಯದ ಕಾಂಪೌಂಡ್ ಗೋಡೆ ಪಕ್ಕದಲ್ಲಿನ ಗಿಡದಲ್ಲಿ 18 ವಯಸ್ಸಿನ ವಿದ್ಯಾರ್ಥಿ ಮಂಜುನಾಥ್ ಪೂಜಾರಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ವಿದ್ಯಾರ್ಥಿ ತಂದೆ ಮಲ್ಲಪ್ಪ ಪೂಜಾರಿ ನನ್ನ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಯುವತಿಯೊಬ್ಬಳು ನನ್ನ ಮಗನನ್ನು ಪ್ರೀತಿಸುತ್ತಿರುವ ವಿಷಯ ದರ್ಶನಾಪುರ ಗ್ರಾಮದ ನಾಲ್ವರು ಯುವಕರಿಗೆ ತಿಳಿದಿತ್ತು. ಅವರೇ ಯೋಜನೆ ರೂಪಿಸಿ ನನ್ನ ಮಗನ ಕುತ್ತಿಗೆಗೆ ನೇಣುಹಾಕಿ ಮರಕ್ಕೆ ಬಿಗಿದು ಕೊಲೆ ಮಾಡಿರುವುದಾಗಿ ಊರಿನಲ್ಲಿ ಸುದ್ದಿ ಹಬ್ಬಿದೆ. ಕೂಡಲೇ ತನಿಖೆ ಕೈಗೊಳ್ಳಬೇಕು ಎಂದು ಮೃತ ವಿದ್ಯಾರ್ಥಿ ತಂದೆ ಮತ್ತೊಮ್ಮೆ ಫೆ.8 ರಂದು 2022ರಂದು ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ಆರಂಭಿಸಿದ್ದ ಪೊಲೀಸರಿಗೆ ಮಹತ್ವದ ಸುಳಿವು: ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಪ್ರಕರಣ ಸತ್ಯಾಸತ್ಯತೆ ಅರಿಯಲು ಅಶೋಕ್ ಬಂಗಾರಿ ಎಂಬುವವರನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿ ವರದಿ ಪಡೆದಿದ್ದಾರೆ. ಅದರಂತೆ ನಾಲ್ವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ.
ಶಹಾಪುರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಡಾ. ಸಿಬಿ ವೇದಮೂರ್ತಿ, ಮೃತ ಯುವಕ ಅದೇ ಗ್ರಾಮದ ಬೇರೆ ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನುವ ಮಾಹಿತಿಯಿದ್ದು, ದರ್ಶನಾಪುರ ಗ್ರಾಮದ ರಾಮಣ್ಣ, ರಾಯಪ್ಪ, ಮಲ್ಲಪ್ಪ ಹಾಗೂ ಭೀಮರೆಡ್ಡಿ ಅವರು ಕೊಲೆಯಲ್ಲಿ ಭಾಗಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಡಿವೈಎಸ್ಪಿ ಡಾ. ದೇವರಾಜ್, ಸಿಪಿಐ ಚೆನ್ನಯ್ಯ ಹಿರೇಮಠ್, ಪಿಐ ಶ್ರೀನಿವಾಸ್ ಅಲ್ಲಾಪುರ, ಗೂಗಿ ಪಿಎಸ್‌ಐ ಅಯ್ಯಪ್ಪ, ಪೊಲೀಸ್ ಸಿಬ್ಬಂದಿ ಇದ್ದರು.
ಓದಿ: ಪೊಲೀಸರಿಗೆ ಕೆಲಸ ಕೊಡದಂತೆ ವರ್ತಿಸಿ..ರಾಜ್ಯದ ಜನರಲ್ಲಿ ಮನವಿ ಮಾಡಿದ ಗೃಹ ಸಚಿವ - ಆರಗ ಜ್ಞಾನೇಂದ್ರ