ಯಾದಗಿರಿ : ಜಗತ್ತು ನಿತ್ಯ ಬದಲಾವಣೆ ಕಾಣ್ತಾಯಿದೆ. ಅದರಲ್ಲೂ ಯುವತಿಯರಂತೂ ಫ್ಯಾಷನ್ ಬದುಕಿಗೆ ಮಾರು ಹೋಗಿದ್ದಾರೆ. ಅಂಥದ್ರಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿದ್ದ 20 ವರ್ಷದ ಯುವತಿ ಯತಿಶಾ ಸನ್ಯಾಸತ್ವ ಸ್ವೀಕರಿಸಿ ಎಲ್ಲರಿಗೂ ಶಾಕ್ ಆಗುವಂತೆ ಮಾಡಿದ್ದಾಳೆ.
ಯಾದಗಿರಿ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ರತ್ನಾಗಿರಿ ಮೂಲದ ಜೈನ ಧರ್ಮಕ್ಕೆ ಸೇರಿದ ದೀಪಕ್ ಹಾಗೂ ಮೀನಾ ಎಂಬ ದಂಪತಿಯ ಏಕೈಕ ಪುತ್ರಿ ಯತಿಶಾ ಸಾಂಸಾರಿಕ ಜೀವನಕ್ಕೆ ವಿದಾಯ ಹೇಳಿ ಆಧ್ಯಾತ್ಮದ ಕಡೆ ಹೆಜ್ಜೆ ಹಾಕಿದ್ದಾಳೆ.
ಸನ್ಯಾಸತ್ವದ ಕಡೆ ಮುಖ ಮಾಡಿದ ಯುವತಿಗೆ ಯಾದಗಿರಿ ನಗರದ ಜೈನ ಬಡಾವಣೆಯಲ್ಲಿ ಸಂಬಂಧಿಕರು ಹಾಗೂ ಪೋಷಕರು ಸೇರಿ ರಥದಲ್ಲಿ ಕೂರಿಸಿ, ಬಾಜಾ ಭಜಂತ್ರಿ ಮೂಲಕ ಡ್ಯಾನ್ಸ್ ಮಾಡಿ ಖುಷಿ ಖುಷಿಯಾಗಿ ಬೀಳ್ಕೊಡುಗೆ ನೀಡಿದ್ದಾರೆ.
ಯುವತಿ ಇಂದಿನಿಂದ ಕುಟುಂಬ ತ್ಯಜಿಸಿ ದೂರ ಆಗಿದ್ದರಿಂದ ಎಲ್ಲರೂ ಆಕೆಯನ್ನು ದೇವರಂತೆ ಕಂಡರು. ಯುವತಿಯಿಂದ ಬಡವರಿಗೆ ಬಟ್ಟೆ, ಧಾನ್ಯ ಸೇರಿದಂತೆ ವಿವಿಧ ವಸ್ತುಗಳನ್ನು ದಾನ ಮಾಡಿಸಿದ್ರು. ಈಕೆ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಬಿಕಾಂ ಪದವಿ ಮುಗಿಸಿದ್ದಾಳೆ. ಒಬ್ಬಳೇ ಮಗಳೆಂದು ತಂದೆ ಸಾಕಷ್ಟು ಪ್ರೀತಿಯಿಂದ ಸಾಕಿದ್ದರು. ಆದರೆ, ಯುವತಿ ಪದವಿ ಮುಗಿಸಿದ ಮೇಲೆ ಸಂಸಾರಿಕ ಜೀವನ ತ್ಯಜಿಸಿ ಆಧ್ಯಾತ್ಮದ ಕಡೆ ಒಲವು ತೋರಿಸಿದ್ದಾಳೆ.
ಜೈನ ದೀಕ್ಷೆ ಸ್ವೀಕರಿಸೋದು ಅಷ್ಟೊಂದು ಸುಲಭದ ಕೆಲಸ ಅಲ್ಲ. ದೀಕ್ಷೆ ಪಡೆದ ಬಳಿಕ ಸಾಕಷ್ಟು ಕಠಿಣ ಜೀವನ ಸಾಗಿಸಬೇಕಾಗುತ್ತೆ. ಯತಿಶಾ ಯಾವುದೇ ಕಾರಣಕ್ಕೂ ಚಪ್ಪಲಿ ಹಾಕುವ ಹಾಗಿಲ್ಲ. ಕರೆಂಟ್ ಇಲ್ಲದ ಕೋಣೆಯಲ್ಲಿ ವಾಸ ಮಾಡ್ಬೇಕು. ಅಷ್ಟೇ ಯಾಕೆ ಎಸಿ, ಫ್ಯಾನ್, ಕೂಲರ್ ಸಹ ಬಳಸಬಾರದು. ಗುಡ್ಡಗಾಡಿನಲ್ಲಿ ಸಾಧು-ಸಂತರಂತೆ ಬದುಕಬೇಕು. ದೀಕ್ಷೆ ಸ್ವೀಕರಿಸಿದ ಬಳಿಕ ಕುಟುಂಬಕ್ಕೂ ದೀಕ್ಷೆ ಪಡೆದ ಯತಿಶಾಗೆ ಯಾವುದೇ ಸಂಬಂಧ ಇರೋದಿಲ್ಲ.
ಹೀಗಾಗಿ ನಾನಾ ಕಠಿಣವಾದ ನಿಯಮಗಳನ್ನು ಸನ್ಯಾಸತ್ವ ಸ್ವೀಕರಿಸಿದ ಯತಿಶಾ ಪಾಲಿಸಬೇಕಾಗಿದೆ. ದೀಕ್ಷೆ ಪಡೆದ ಬಳಿಕ ಸ್ವತಃ ತಂದೆ-ತಾಯಿಯೇ ಮುಂದೆ ಬಂದರೂ ಸಹ ಭಕ್ತರಂತೆ ಕಾಣಬೇಕಾಗಿದೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಯತಿಶಾ ದೀಕ್ಷೆ ಪಡೆದಿದ್ದಾಳೆ.
ಜೈನ ಗುರುಗಳ ಸಮ್ಮುಖದಲ್ಲಿ ಮುಂದಿನ ಮಾರ್ಚ್ 21ರಂದು ಮಹಾರಾಷ್ಟ್ರದ ಪುಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಯತಿಶಾ ಕುಟುಂಬದ ಸಂಬಂಧ ಕಳೆದುಕೊಂಡು ಆಧ್ಯಾತ್ಮಿಕ ಜೀವನದತ್ತ ಹೆಜ್ಜೆ ಹಾಕುತ್ತಾಳೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯತಿಶಾ, ನನ್ನ ತಂದೆ ತಾಯಿಯ ಬಳಿ ಸಾಕಷ್ಟು ಆಸ್ತಿಯಿದೆ. ಆದ್ರೆ, ಅದರಿಂದ ನನಗೆ ಖುಷಿಯಿಲ್ಲ. ಹೀಗಾಗಿ ನಾನು ದೀಕ್ಷೆ ಪಡೆದು ಸಂಸಾರಿಕ ಜೀವನ ತ್ಯಜಿಸುತ್ತಿರುವುದಾಗಿ ತಿಳಿಸಿದ್ದಾಳೆ. ಕೋಟ್ಯಂತರ ರೂ. ಆಸ್ತಿ ಇದ್ದು ಮೋಜು, ಮಸ್ತಿ ಮಾಡಿ ಜೀವನ ನಡೆಸಬೇಕಿದ್ದ ಯತಿಶಾ ಸನ್ಯಾಸತ್ವ ಸ್ವೀಕರಿಸಿರುವುದು ನಿಜಕ್ಕೂ ಅಭಿನಂದನೀಯ.