ಯಾದಗಿರಿ: ಉಪ ಚುನಾವಣೆಯಲ್ಲಿ ಬಿಜೆಪಿಯ 15 ಅಭ್ಯರ್ಥಿಗಳು ಕೂಡಾ ಜಯ ಸಾಧಿಸುತ್ತಾರೆ ಎಂದು ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ನಿಮಗದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಭವಿಷ್ಯ ನುಡಿದಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ರಾಜ್ಯದಲ್ಲಿ ಬಿಎಸ್ವೈ ಹವಾದಿಂದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಗೆಲುವು ಸಿಗಲಿದೆ ಎಂದರು. ಈ ಚುನಾವಣೆ ಫಲಿತಾಂಶದ ನಂತರ ಜೆಡಿಎಸ್ ಪಕ್ಷ ಛಿದ್ರ ಛಿದ್ರ ಆಗುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಒಡಕು ಉಂಟಾಗಲಿದೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಹರಿಹಾಯ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಅಸಾಧ್ಯ. ಎರಡು ಪಕ್ಷದ ನಾಯಕರ ಜಗಳ ತಾರಕಕ್ಕೇರಿದೆ. ಹೀಗಾಗಿ ಚುನಾವಣೆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ನ ಬಹಳಷ್ಟು ಶಾಸಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಡಿಸೆಂಬರ್ 9ಕ್ಕೆ ರಾಜ್ಯದ ಜನರಿಗೆ ಬಿಎಸ್ವೈ ಸಿಹಿ ಸುದ್ದಿ ನೀಡಲಿದ್ದಾರೆ. ಸರ್ಕಾರದ ಪೂರ್ಣಾವಧಿಗೆ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ. ರಮೇಶ್ ಜಾರಕಿಹೊಳಿ, ಡಾ. ಕೆ.ಸುಧಾಕರ್ ಹಾಗೂ ಹೆಚ್.ವಿಶ್ವನಾಥ್ ಈ ಚುನಾವಣೆಯಲ್ಲಿ ಗೆದ್ದೇ ಗೆಲ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿಯಲ್ಲಿದೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷದವರಾದ ಹರಿಪ್ರಸಾದ್, ಕೆ.ಹೆಚ್.ಮುನಿಯಪ್ಪ, ಮಾಜಿ ಸಿಎಂ ವೀರಪ್ಪ ಮೋಯ್ಲಿ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರೂ ಸಹಕರಿಸುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಬಣ ಕುಗ್ಗಿದೆ ಎಂದರು.