ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಕೇಕೆ ಮುಂದುವರೆದಿದೆ. ನಿನ್ನೆ ಮತ್ತೆ 28 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಸಂಖ್ಯೆ 500ರ ಗಡಿ ತಲುಪುತ್ತಿದೆ. ಇದರಲ್ಲಿ 300 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲಾಡಳಿತಕ್ಕೆ ನೆಮ್ಮದಿ ತರಿಸಿದೆ.
ಈ ಮಧ್ಯೆ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯದ ಅಟೆಂಡರ್ ಒಬ್ಬರು ಕೊರೊನಾ ಸೋಂಕಿನಿಂದ ನಿಂದ ಮೃತಪಟ್ಟಿದ್ದು, ಆತಂಕ ಮೂಡಿಸಿದೆ. ಜಿಲ್ಲೆಯ ಎನ್ಟಿಪಿಸಿಗೆ ತಗುಲಿದ್ದ ಕೊರೊನಾ ಸೊಂಕು ಈಗ ಮಹಿಳಾ ವಿವಿಗೂ ವ್ಯಾಪಿಸಿದ್ದು ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸಿದೆ. ಕನಿಷ್ಠ 250 ವಿವಿ ಸಿಬ್ಬಂದಿಗಳಿಗೂ ಕೊರೊನಾ ಸೊಂಕು ತಗುಲುವ ಆತಂಕ ಹುಟ್ಟಿಸಿದೆ. ಈಗಾಗಲೇ ಇವರ ಸ್ವ್ಯಾಬ್ ಟೆಸ್ಟ್ ಪಡೆದುಕೊಳ್ಳಲಾಗಿದೆ. ಇದರ ಜೊತೆ ನಗರ ಪ್ರದೇಶದಲ್ಲಿ ಕೆಲವೇ ಬಡಾವಣೆಗಳಿಗೆ ಸೀಮಿತವಾಗಿದ್ದ ಕಂಟೇನ್ಮೆಂಟ್ ಝೋನ್ ನಿತ್ಯ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ನಗರದ ಪ್ರಮುಖ ಬಡಾವಣೆಗಳಲ್ಲಿಯೇ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವುದು ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ.
ಕಳೆದ 2 ದಿನಗಳಿಂದ ರಾತ್ರಿ ಅನ್ಲಾಕ್ 2.0 ಜಾರಿಯಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನತೆ ಮಾತ್ರ ರಾತ್ರಿ ಸುತ್ತಾಡುವುದನ್ನು ಕಡಿಮೆ ಮಾಡಿಲ್ಲ. ಪೊಲೀಸರು ನಿತ್ಯ ರಾತ್ರಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುತ್ತಿದ್ದರೂ ಅಷ್ಟಾಗಿ ಪರಿಣಾಮ ಬೀರಿಲ್ಲ. ಜಿಲ್ಲಾಡಳಿತ ಸಹ ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯ ಮಾಡಿಕೊಟ್ಟಿದ್ದು, ರೋಗ ಹತೋಟಿಗೆ ತರಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ.