ಮುದ್ದೇಬಿಹಾಳ: ತಾಲೂಕಿನ ಯರಗಲ್ ಗ್ರಾಮದಲ್ಲಿ ಅ.23 ರಿಂದ ಕಾಣಿಸಿಕೊಂಡಿರುವ ವಾಂತಿ ಬೇಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಾಸ್ಪತ್ರೆಯಿಂದ ಸಂಗ್ರಹಿಸಿದ್ದ ನೀರಿನ ವರದಿ ಬಹಿರಂಗಗೊಂಡಿದೆ. ಒಂದು ಮಾದರಿಯಲ್ಲಿನ ನೀರು ಕುಡಿಯುವುದಕ್ಕೆ ಯೋಗ್ಯ ಇರಲಿಲ್ಲ ಎಂದು ವರದಿ ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ತಾಲೂಕು ವೈದ್ಯಾಧಿಕಾರಿ ಡಾ.ಸತೀಶ್ ತಿವಾರಿ, ಅ.23 ರಂದು ತಾಲೂಕು ಆಡಳಿತದ ಪ್ರಯೋಗಾಲಯ ತಜ್ಞರು ಮೂರು ಕಡೆಗಳಲ್ಲಿ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅದನ್ನು ತಾಲೂಕಿನ ಲ್ಯಾಬ್‌ನಲ್ಲಿ ತಪಾಸಣೆ ನಡೆಸಿದಾಗ ಅದರಲ್ಲಿ ಗ್ರಾಮದ ಸಂಗನಬಸಪ್ಪ ಘಾಳಪೂಜಿ ಅವರ ಮನೆಯ ನಳದ ನೀರು ನೀರು ಕುಡಿಯುವುದಕ್ಕೆ ಯೋಗ್ಯ ಇರಲಿಲ್ಲ ಎಂದು ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ಅ.26 ರಂದು ಜಿಲ್ಲಾ ಸಮೀಕ್ಷಾ ಘಟಕದಿಂದ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಬಳಿಯ ಶುದ್ಧ ಕುಡಿವ ನೀರಿನ ಘಟಕದ ನೀರು, ಮಹಾದೇವ ಗಡೇದ ಅವರ ಮನೆಯ ನಲ್ಲಿ ನೀರು, ಪವಾಡೆಪ್ಪ ಡೊಮನಾಳ ಅವರು ಟ್ಯಾಂಕರ್ ಮೂಲಕ ಪಡೆದುಕೊಂಡಿರುವ ನೀರು ಹಾಗೂ ಗ್ರಾಮಕ್ಕೆ ಪೂರೈಸುತ್ತಿರುವ ಟ್ಯಾಂಕರ್ ನೀರು ಕುಡಿಯುವುದಕ್ಕೆ ಯೋಗ್ಯವಾಗಿದೆ ಎಂದು ವರದಿ ಬಂದಿದೆ.

ಮಾಜಿ ಶಾಸಕ ನಾಡಗೌಡ ಭೇಟಿ: ಯರಗಲ್ ಗ್ರಾಮಕ್ಕೆ ಮಾಜಿ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಗುರುವಾರ ಭೇಟಿ ನೀಡಿ ಇತ್ತೀಚೆಗೆ ಮೃತಪಟ್ಟ ನೀಲಮ್ಮ ಬೆನಕಣ್ಣವರ ಹಾಗೂ ಗುರುರಾಜ ಮಳಗಿ ಅವರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಕಲುಷಿತ ನೀರು ಸೇವನೆಯಿಂದಲೇ ನಮ್ಮೂರಿನ ಇಬ್ಬರು ಸಾವನ್ನಪ್ಪಿದ್ದರೂ ಅಧಿಕಾರಿಗಳು ಅದನ್ನು ಮರೆಮಾಚುವ ಪ್ರಯತ್ನ ನಡೆಸಿದ್ದಾರೆ ಎಂದು ಗಮನಕ್ಕೆ ತಂದರು. ದೂರವಾಣಿಯಲ್ಲಿ ಡಿಎಚ್‌ಒ ಹಾಗೂ ಟಿಎಚ್‌ಒ ಅವರೊಂದಿಗೆ ಮಾತನಾಡಿದ ಮಾಜಿ ಶಾಸಕರು, ಮೃತರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಡೆದಿರುವ ಜೆಜೆಎಂ ಕಾಮಗಾರಿ ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕುರಿತು ದೂರುಗಳು ವ್ಯಾಪಕವಾಗಿ ಬರುತ್ತಿದ್ದು ಅದನ್ನು ಸರಿಪಡಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಒತ್ತಾಯಿಸಿದರು.
ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರನ್ನು ವಿಜಯಪುರ ಆಸ್ಪತ್ರೆಗೆ ಕಳಿಸುವ ಬದಲು ತಾಲೂಕಾಸ್ಪತ್ರೆಯಲ್ಲಿಯೇ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಅವರು ಬದುಕುಳಿಯುತ್ತಿದ್ದರು. ಆದರೆ ಇಲ್ಲಿ ವೈದ್ಯಕೀಯ ಇಲಾಖೆ ಹಾಗೂ ತಾಲೂಕು ಆಡಳಿತ ಈ ಪ್ರಕರಣವನ್ನು ನಿಭಾಯಿಸುವಲ್ಲಿ ಎಡವಿದೆ. ಕಲುಷಿತ ನೀರು ಕುಡಿದಿದ್ದರಿಂದಲೇ ಸಾವನ್ನಪ್ಪಿರುವ ಮೃತರ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಭೇಟಿ: ಯರಗಲ್ ಗ್ರಾಮಕ್ಕೆ ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಗುರುವಾರ ಭೇಟಿ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ 24 ತಾಸು ಆ್ಯಂಬುಲೆನ್ಸ್ ಗ್ರಾಮದಲ್ಲಿದ್ದು, ಒಂದು ಓಪಿಡಿ ಕೇಂದ್ರ ತೆರೆಯಲಾಗಿದೆ.
ನಿರಂತರವಾಗಿ ಟ್ಯಾಂಕರ್ ನೀರನ್ನೇ ಪೂರೈಸಲಾಗುತ್ತಿದ್ದು, ನಲ್ಲಿ ನೀರನ್ನು ಬಳಕೆಗೆ ಮಾತ್ರ ಉಪಯೋಗಿಸಲು ತಿಳಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪರಿಸ್ಥಿತಿ ಸದ್ಯಕ್ಕೆ ಹತೋಟಿಯಲ್ಲಿದ್ದು ಯಾರೂ ಆತಂಕ ಪಡುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.