ಮುದ್ದೇಬಿಹಾಳ : ಪ್ರಾಚೀನ ಕಾಲದ ಇತಿಹಾಸ ಹೊಂದಿರುವ ಇಲ್ಲಿನ ಕಿಲ್ಲಾ ಗಲ್ಲಿಯ ಹೆಸರನ್ನು ಪುರಸಭೆಯ ದಾಖಲೆಗಳಲ್ಲಿ ರದ್ದುಗೊಳಿಸಲಾಗಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದ ಉದಯ ರಾಯಚೂರ ಎಂಬಾತ, ಅಧಿಕಾರಿಗಳು ನೀಡಿದ ಲಿಖಿತ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದಿದ್ದಾರೆ.
ಕಳೆದೆರಡು ದಿನಗಳಿಂದ ಇಲ್ಲಿನ ಕಿಲ್ಲಾ ನಿವಾಸಿ ಉದಯ ರಾಯಚೂರ ಪುರಸಭೆಯ ದಾಖಲೆಗಳಲ್ಲಿ ಕಿಲ್ಲಾ ಗಲ್ಲಿಯ ಹೆಸರನ್ನು ಸೇರಿಸಬೇಕು ಹಾಗೂ ಇದನ್ನು ರದ್ದುಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಏಕಾಂಗಿಯಾಗಿ ಪಟ್ಟಣದ ಪುರಸಭೆಯ ಎದುರಿಗೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ. ಇದಕ್ಕೆ ಮಣಿದ ಅಧಿಕಾರಿಗಳು ಇಂದು ಲಿಖಿತ ಭರವಸೆ ನೀಡಿ ಆತನನ್ನು ಉಪಚರಿಸಿದರು.
ಬಳಿಕ ಹೋರಾಟಗಾರ ಉದಯ ರಾಯಚೂರ ಮಾತನಾಡಿ, ಪ್ರಾಚೀನ ಕಾಲದ ಈಶ್ವರಲಿಂಗ ದೇವಸ್ಥಾನ ಕಿಲ್ಲಾದಲ್ಲಿದೆ. ಪುರಾತನ ಇತಿಹಾಸ ಹೊಂದಿರುವ ಲಕ್ಷ್ಮಿಬಾವಿ ಹಾಗೂ ಕೋಟೆ ಗೋಡೆಯೂ ಇದೆ. ಊರ ಅಗಸಿ ಬಾಗಿಲು ಹೊಂದಿದ್ದು 2017ರಿಂದ ಪುರಸಭೆಯ ದಾಖಲೆಗಳಲ್ಲಿ ಈ ಓಣಿಯ ಹೆಸರನ್ನೇ ರದ್ದು ಮಾಡಲಾಗಿದೆ ಎಂದರು.
ಈ ಬಗ್ಗೆ ಪುರಸಭೆಯ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿಟ್ಟು ಠರಾವು ಪಾಸು ಮಾಡಿ ಸರಿಪಡಿಸುವ ಭರವಸೆಯನ್ನು ನೀಡಿದ್ದು, ಅದರಂತೆ ಹೋರಾಟ ಅಂತ್ಯಗೊಳಿಸಿದ್ದೇನೆ. ಒಂದು ವೇಳೆ ಅವರ ಭರವಸೆ ಹುಸಿಯಾದ್ರೆ ಮತ್ತೆ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.