ವಿಜಯಪುರ: ಇದೇ ಮೊದಲ ಬಾರಿಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಸೈಕ್ಲಿಂಗ್ ಸ್ಪರ್ಧೆ ಫೆ. 8 ರಿಂದ 11ರವರೆಗೆ ನಗರದಲ್ಲಿ ನಡೆಯಲಿದೆ ಎಂದು ಎ.ಎಸ್.ಪಾಟೀಲ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎನ್. ಕೋರಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಅಖಿಲ ಭಾರತ ವಿಶ್ವವಿದ್ಯಾಲಯಗಳ ಒಕ್ಕೂಟ, ಸೈಕ್ಲಿಂಗ್ ಸ್ಪರ್ಧೆ ಸಂಘಟಿಸುವ ಜವಾಬ್ದಾರಿಯನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ನೀಡಿದೆ. ರಾಣಿ ಚೆನ್ನಮ್ಮ ವಿವಿ ಜೊತೆ ನಮ್ಮ ಕಾಲೇಜು ಕೈ ಜೋಡಿಸಲಿದೆ ಎಂದು ತಿಳಿಸಿದರು.
ಫೆ. 8 ರಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50 ರ ಟೋಲ್ ಪ್ಲಾಜಾದಲ್ಲಿ ಸ್ಪರ್ಧೆ ಚಾಲನೆಗೊಳ್ಳಲಿದೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಸೈಕ್ಲಿಂಗ್ ಸ್ಪರ್ಧೆ ಸಂಘಟಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಸೈಕ್ಲಿಂಗ್ ಚಾಂಪಿಯನ್ ಶಿಪ್ನಲ್ಲಿ ವಿವಿಧ ರಾಜ್ಯಗಳ 28 ವಿಶ್ವವಿದ್ಯಾಲಯಗಳ 127 ಸೈಕ್ಲಿಂಗ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಹಕರಿಸಲು ವಿವಿಧ ಸಂಘ, ಸಂಸ್ಥೆಗಳ 400 ಸ್ವಯಂ ಸೇವಕರು ಆಗಮಿಸಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಡಾ. ಎಂ.ಬಿ.ಪಾಟೀಲ್, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ. ರಾಮಚಂದ್ರೆಗೌಡ ಸೇರದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಫೆ.11ರಂದು ಬಿಎಲ್ಡಿ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಮಾರೋಪ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಬಿಎಲ್ಡಿ ಸಂಸ್ಥೆಯ ಉಪಾಧ್ಯಕ್ಷ ವಿ.ವಿ.ನಿಂಬಾಳ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಎಲ್ಡಿ ಸಂಸ್ಥೆಯ ಪಿ.ಆರ್.ಓ. ಡಾ.ಮಹಾಂತೇಶ ಬಿರಾದಾರ, ಸೈಕ್ಲಿಸ್ಟ್ ಅಲಕಾ ಪಡತರೆ, ಪ್ರೊ.ದಿಲೀಪ ಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.